ಜೀವವಿಜ್ಞಾನ  -
	ಜೀವಿಗಳ ವೈಜ್ಞಾನಿಕ ಅಧ್ಯಯನ (ಬಯಾಲಜಿ). ಮಾನವನೂ ಸೇರಿದಂತೆ ಜೀವಿಗಳು ತಮ್ಮ ಜೀವಮಾನದಲ್ಲಿ ನಡೆಸುವ ಸಮಸ್ತ ಕಾರ್ಯಚಟುವಟಿಕೆಗಳ, ಅವುಗಳ ವಿಕಾಸದ ಇತಿಹಾಸ ಮತ್ತು ರೋಗರುಜಿನಗಳ ಅಧ್ಯಯನವನ್ನು ಇದು ಒಳಗೊಂಡಿದೆ. ಆದಿಮಾನವನಿಗೆ ಜೀವವಿಜ್ಞಾನದ ಬಗ್ಗೆ ಅಷ್ಟಾಗಿ ಗೊತ್ತಿರದಿದ್ದರೂ ಆತನ ಬುದ್ಧಿಶಕ್ತಿ ವಿಕಸಿದಂತೆಲ್ಲ-ಜೀವವೆಂಬುದೇನು? ಜೀವನದ ಕ್ರಮ ಹೇಗೆ? ಜೀವಿಗಳಿಗಿರುವ ಪರಸ್ಪರ ಬಾಂಧವ್ಯ ಎಂತಹುದು?-ಎಂದು ಮುಂತಾಗಿ ತಿಳಿಯತೊಡಗಿದ. ಅರಿಸ್ಟಾಟಲ್ ಕಾಲದಲ್ಲಿ ಅಂಕುರಿಸಿ, ಮಧ್ಯಯುಗದಲ್ಲಿ ಅಭಿವೃದ್ಧಿಗೊಂಡ ಜೀವವಿಜ್ಞಾನ 19ನೆಯ ಶತಮಾನದ ಅಂತ್ಯದವರೆಗೂ ಕೇವಲ ವಿವರಣಾತ್ಮಕವಾಗಿತ್ತು. ಆದರೆ 20ನೆಯ ಶತಮಾನದ ಆದಿಯಿಂದ ತಳಿವಿಜ್ಞಾನಿಗಳ, ವಿಕಾಸವಾದಿಗಳ ಹಾಗೂ ಪರಿಸರತಜ್ಞರ ಪರಿಶ್ರಮದಿಂದ ಜೀವವಿಜ್ಞಾನ ವಿವಿಧ ಶಾಖೆಗಳಾಗಿ ಒಡೆದದ್ದಲ್ಲದೆ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಗಳ ನೆರವಿನಿಂದ ಸರ್ವತೋಮುಖವಾಗಿ ಬೆಳೆದು ಈಗ ಬಾಹ್ಯಾಕಾಶ ಜೀವಿಗಳ ಪರಿಚಯಕ್ಕೂ ಹೆಜ್ಜೆಯಿಟ್ಟಿದೆ. ಪ್ರಸಕ್ತ ಲೇಖನದಲ್ಲಿ ಜೀವವಿಜ್ಞಾನವನ್ನು ಈ ಮುಂದಿನ ಪ್ರಧಾನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಲಾಗಿದೆ.

	1. ಚಾರಿತ್ರಿಕ ಹಿನ್ನೆಲೆ
(ಚಿ) ಆದಿಯಲ್ಲಿ ಜೀವವಿಜ್ಞಾನದ ಬೆಳೆವಣಿಗೆ
(b) ಮಧ್ಯಕಾಲದಲ್ಲಿ ಜೀವವಿಜ್ಞಾನದ ಸ್ಥಿತಿಗತಿ
(ಛಿ) ಜೀವಾಧ್ಯಯನದ ಪುನರುಜ್ಜೀವನ
(ಜ) ತುಲನಾತ್ಮಕ ಅಂಗರಚನಾಶಾಸ್ತ್ರ ಮತ್ತು ಶರೀರವಿಜ್ಞಾನ
(e) ಆಧುನಿಕ ಜೀವಶಾಸ್ತ್ರ
	2. ವಿಕಾಸವಾದ
	3. ಜೀವ ಸ್ವರೂಪ
(ಚಿ) ಜೀವಿಯ ಪ್ರಕೃತಿ
(b) ಜೀವದ್ರವ್ಯದ ಗುಣಲಕ್ಷಣಗಳು
(i) ಸಂಯುಕ್ತಕಗಳು
(ii) ಕಿಣ್ವಗಳು
(iii) ವಿದ್ಯುತ್ ಸ್ವಭಾವ
(iv) ದ್ಯುತಿಪಟುತ್ವ
(v) ಇತರ ಗುಣಗಳು
(vi) ಕೋಶ ರಚನೆ
(vii) ಪ್ರತಿಸ್ಪಂದನ ಮತ್ತು ಹೊಂದಾಣಿಕೆ
	4. ಜೀವಜಗತ್ತು
(ಚಿ) ಜೀವಿಯ ವ್ಯಾಪ್ತಿ
(b) ದ್ಯುತಿಸಂಶ್ಲೇಷಣೆ ಮತ್ತು ಶಕ್ತಿ ಚಕ್ರ
(ಛಿ) ಜೀವೋತ್ಪತ್ತಿಯ ಸಿದ್ಧಾಂತಗಳು
(ಜ) ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳು
ಜೀವಾಧ್ಯಯನ ಕ್ರಮ
(ಚಿ) ಜೀವಿಗಳ ರೂಪ, ರಚನೆ ಮತ್ತು ಕ್ರಿಯಾವಿನ್ಯಾಸ
(b) ಭ್ರೂಣಶಾಸ್ತ್ರಾಧ್ಯಯನ
(ಛಿ) ತಳಿವಿಜ್ಞಾನ
(ಜ) ಜೀವಿಗಳಿಗಿರುವ ಅಂತರ ಸಂಬಂಧ
(e) ಜೀವಿಗಳ ವರ್ಗೀಕರಣ
(ಜಿ) ವಿಕಸದ ದಿಗ್ದರ್ಶನ

1. ಚಾರಿತ್ರಿಕ ಹಿನ್ನಲೆ : ಬಯಾಲು (ಜೀವವಿಜ್ಞಾನ) ಎಂಬ ಪದವನ್ನು ಮೊಟ್ಟಮೊದಲಿಗೆ ಬಳಸಿದವರ ಗಾಟ್ ಫ್ರೀಡ್ ಟ್ರೆವಿರಾನಸ್ (1776-1837) ಎಂಬಾತ. ಅವನು 1802ರಲ್ಲಿ ಬರೆದ ಬಯಾಲಜೀ ಓಡೆರ್ ಡೀ ಫಿಲಾಸೊಫಿ ಡೆರ್ ಲೀಬೆಂಡೆನ್ ನಾಟುರಾ ಎಂಬ ಪುಸ್ತಕದಲ್ಲಿ ಈ ಪದವನ್ನು ಬಳಸಿದ. ಆದರೆ ಈ ಪದವನ್ನು ಜನಪ್ರಿಯಗೊಳಿಸಿದವ ಪ್ರಸಿದ್ಧ ವಿಕಾಸವಾದಿ ಜೀನ್ ಬ್ಯಾಪ್ಟಿಸ್ಟ್ ಲಮಾರ್ಕ್ (1774-1829). ಆಧುನಿಕ ಅರ್ಥದಲ್ಲಿ ಈ ಪದವನ್ನು ಇಂಗ್ಲಿಷಿನಲ್ಲಿ ಬಳಕೆಗೆ ತಂದಾತ ಸರ್ ವಿಲಿಯಮ್ ಲಾರೆನ್ಸ್ (1783-1867). 

(ಚಿ) ಆದಿಯಲ್ಲಿ ಜೀವವಿಜ್ಞಾನದ ಬೆಳೆವಣಿಗೆ : ಗ್ರೀಕರರಿಂದ ಉದಯವಾದ ಈ ವಿಜ್ಞಾನ ಕ್ರಿ.ಪೂ. 500ರಲ್ಲಿ ಆಲ್ಕ್‍ಮೀಯಾನನಿಂದ ಆರಂಭವಾಯಿತೆಂದು ಊಹಿಸಲಾಗಿದೆ. ಈತ ಅಕ್ಷಿನರ, ಕರ್ಣನಾಳ ಮತ್ತು ಭ್ರೂಣದ ಬೆಳೆವಣಿಗೆಗಳನ್ನು ಪ್ರಥಮ ಬಾರಿಗೆ ವಿವರಿಸಿದ. ರಕ್ತವೇ ಜೀವವೆಂದು ಪರಿಗಣಿಸಿದ್ದ ಎಂಪೆಡಾಕ್ಲಿಸ್‍ನ (ಕ್ರಿ.ಪೂ. 490-430) ಕಾಲದಲ್ಲಿ ವಾಯು ವಿತರಣೆಗೂ ರಕ್ತ ಪರಿಚಲನೆಗೂ ಹೃದಯವೇ ಮೂಲವೆಂದು ನಂಬಿದ್ದರು. ಅಂತೆಯೇ ಕ್ರಿ.ಪೂ. 5ನೆಯ ಶತಮಾನದಲ್ಲಿ, ಹಿಪ್ಪೋಕ್ರೇಟಿಕ್ ಸಂಗ್ರಹವೆಂದು ಪ್ರಸಿದ್ದವಾಗಿರುವ ಪುಸ್ತಕದಲ್ಲಿ ಪ್ರಾಣಿಗಳ ವರ್ಗೀಕರಣದ ಪ್ರಥಮ ಯತ್ನ ನಡೆಯಿತು. ಜೊತೆಗೆ ಕ್ರಿ.ಪೂ. ಸು. 380 ರಲ್ಲಿ ಹಿಪ್ಪೊಕ್ರೇಟಿಸನ ಆಳಿಯನಾದ ಪಾಲಿಬಸ್‍ನು ಜೀವಿಗಳೆಲ್ಲವೂ ರಕ್ತ, ಪಿತ್ತ ಶ್ಲೇಷ್ಮ ಮತ್ತು ದೋಷ ದ್ರವಗಳೆಂಬ ನಾಲ್ಕು ಬಗೆಯ ಧಾತುಗಳಿಂದ ಕೂಡಿವೆಯೆಂದು ನಿರೂಪಿಸಿದ. ಹೃದಯವನ್ನು ಕುರಿತು ಹಿಪ್ಪೊಕ್ರೇಟಸ್ ಕ್ರಿ.ಪೂ. 340ರಲ್ಲಿ ಬರೆದ ಲೇಖನ ಮಾನವನಿಗೂ ಇತರ ಪ್ರಾಣಿಗಳಿಗೂ ಇರುವ ಸಾಮ್ಯವನ್ನು ವಿವರಿಸುತ್ತದೆ. ಅಂತೆಯೇ ವಾಯು ಎಡಹೃತ್ಕರ್ಣಕ್ಕೆ ನೇರವಾಗಿ ಹೊಕ್ಕು, ಸೂಕ್ಷ್ಮ ರೀತಿಯಲ್ಲಿ ರಕ್ತವನ್ನು ಆತ್ಮವನ್ನಾಗಿ ಬದಲಾಯಿಸಿಸುತ್ತದೆಂದು ಹೃತ್ಕರ್ಣವೇ ಪ್ರಜ್ಞೆಯ ನೆಲೆಯೆಂದೂ ಉಲ್ಲೇಖಿಸುತ್ತದೆ. ಆದರೆ ಕ್ರಿ.ಪೂ. 4ನೆಯ ಶತಮಾನಕ್ಕಿಂತ ಹಿಂದಲ ತುಣುಕು ದಾಖಲೆಗಳಿಂದಾಗಿ ಜೀವದ ಬಗ್ಗೆ ಅರಿಸ್ಟಾಟಲಿನ ಪೂರ್ವಿಕರಿಗಿದ್ದ ಜ್ಞಾನ ಅಪೂರ್ಣವೆಂದೇ ಹೇಳಬಹುದು.

ಅರಿಸ್ಟಾಟಲ್ (ಕ್ರಿ.ಪೂ. 384-322) ಹಾಗೂ ಆತನ ಅಚ್ಚುಮೆಚ್ಚಿನ ಶಿಷ್ಯನಾದ ತೀಯೋಫ್ರಾಸ್ಟಸನ ಬರೆವಣಿಗೆಗಳಿಂದ ಪ್ರಾಚೀನಕಾಲದ ಗ್ರೀಕರಿಗಿದ್ದ ಜೀವಶಾಸ್ತ್ರದ ಪರಿಜ್ಞಾನದ ಪೂರ್ಣಚಿತ್ರದ ಅರಿವಾಗುತ್ತದೆ. ಅರಿಸ್ಟಾಟಲನಿಗೆ ಬಾಲ್ಯದಿಂದಲೂ ಪ್ರಾಣಿಶಾಸ್ತ್ರದ ಮೇಲೆ ಅತಿಶಯವಾದ ಆಸಕ್ತಿ ಇತ್ತು. ಆತನ ತಂದೆ ವೈದ್ಯನಾಗಿದ್ದುದರ ಜೊತೆಗೆ ಪ್ರಾಣಿಶಾಸ್ತ್ರಜ್ಞನಾದ ಅಸ್‍ಕ್ಲಿಪಿಯಸನೊಡನೆ ಇದ್ದ ಬಾಲ್ಯ ಸ್ನೇಹ ಈ ಒಲವು ಬೆಳೆಯಲು ಕಾರಣವಿರಬಹುದೆಂದು ಪ್ರತೀತಿ. ಅರಿಸ್ಟಾಟಲ್ ತನ್ನ ಹೆಂಡತಿಯೊಡನೆ ಮಧುಚಂದ್ರಕ್ಕಾಗಿ ಲೆಸ್‍ಬಾಸ್ ದ್ವೀಪಕ್ಕೆ ಹೋದಾಗ ಸಹ ಅನೇಕ ಸಸ್ಯಗಳನ್ನೂ ಕಡಲುವಾಸಿಗಳ ಚಿಪ್ಪು ಮತ್ತು ಎಲುಬುಗಳನ್ನೂ ಶೇಖರಿಸುವುದರಲ್ಲೇ ನಿರತನಾಗಿದ್ದ. ಅಲ್ಲದೆ ಈತ ಅಲೆಕ್ಸಾಂಡರನ ಗುರುವಾಗಿದ್ದುದರಿಂದ ಇವನಿಗೆ ಚಿತ್ರವಿಚಿತ್ರ ಪ್ರಾಣಿಗಳನ್ನೂ ಸಸ್ಯಗಳನ್ನೂ ಅವುಗಳ ಅವಶೇಷಗಳನ್ನೂ ರಾಜಭಟರು ಒದಗಿಸುತ್ತಿದ್ದರಂತೆ. ಪ್ರಾಣಿಗಳ ಗಡಸು ಅಂಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಕ್ರಮವರಿತು ವಿಂಗಡಿಸಿ, ವರ್ಗೀಕರಿಸುತ್ತಿದ್ದ ತನ್ನ ಪಾರ್ಟಿಬಸ್ ಅನಿಮೇಲಿಯಮ್‍ನಲ್ಲಿ ಪ್ರಕೃತಿಯ ಮರ್ಮವನ್ನು  ಅರಿಯುವ ಮಹತ್ತ್ವ, ಅದನ್ನು ತಿಳಿಯಲು ಅನುಸರಿಸಬೇಕಾದ ವಿಶೇಷ ವಿಧಾನಗಳ ವಿವರಣೆಯನ್ನು ಅರಿಸ್ಟಾಟಲ್ ಕೊಟ್ಟಿದ್ದಾನೆ. ವೈಜ್ಞಾನಿಕ ವರ್ಗೀಕರಣ ವಿಧಾನಕ್ಕೆ ಭದ್ರ ಬುನಾದಿಯನ್ನು ಹಾಕಿದ ಕೀರ್ತಿ ಅರಿಸ್ಟಾಟಲನಿಗೇ ಸಲ್ಲಬೇಕು.
ಡಿ. ಅನಿಮಾ, ಹಿಸ್ಟೋರಿಯ ಅನಿಮೇಲಿಯಮ್, ಡಿ ಪಾರ್ಟಿಬಸ್ ಅನಿಮೇಲಿಯಮ್ ಮತ್ತು ಡಿ ಜನರೇಷನೇ ಅನಿಮೇಲಿಯಮ್  ಎಂಬ ನಾಲ್ಕು ಗ್ರಂಥಗಳಿಂದ ಅರಿಸ್ಟಾಟಲನಿಗಿದ್ದ ಪ್ರಕೃತಿ ಪ್ರೇಮ, ಜೀವಿಗಳಲ್ಲಿ ಕಾಣುವ ನಾನಾ ವ್ಯಾಪಾರಗಳನ್ನು ತಿಳಿಯುವ ಪ್ರತಿಭೆ ಮತ್ತು ವೈಜ್ಞಾನಿಕ ವಿಚಾರ ಸಾಮಥ್ರ್ಯಗಳನ್ನು ಅಳೆಯಬಹುದು. ಆತನ ಕಾಲದಲ್ಲಿ ವೈಜ್ಞಾನಿಕ ವಿಚಾರ ಸಾಮಥ್ರ್ಯಗಳನ್ನು ಅಳೆಯಬಹುದು. ಆತನ ಕಾಲದಲ್ಲಿ ವೈಜ್ಞಾನಿಕ ಸತ್ಯ ಹಾಗೂ ತಾತ್ತ್ವಿಕ ವಿಚಾರಗಳು ಮೇಳವಿಸಿರುವುದನ್ನು ನೋಡಬಹುದು. ಅರಿಸ್ಟಾಟಲನ ಪ್ರಕಾರ ನಿರ್ಜೀವಿಗಳನ್ನು ಸಜೀವಿಗಳಿಂದ ಬೇರ್ಪಡಿಸುವುದು ಆತ್ಮ. ಶರೀರ ಆತ್ಮದ ವಿಕಾಸವೇ ಹೊರತು, ಆತ್ಮ ಶರೀರದ ವಿಕಾಸವಲ್ಲ ; ಮತ್ತು ಶರೀರ ಸಂರಕ್ಷಣೆ, ಸಂತಾನೋತ್ಪತ್ತಿ, ಇಚ್ಛೆ, ಪ್ರತಿಭೆ ಮತ್ತು ತರ್ಕ ಆತ್ಮದ ವ್ಯಾಪಾರಗಳು. ಸಸ್ಯಗಳ ಆತ್ಮವ್ಯಾಪಾರ ಆಹಾರಾರ್ಜನೆ ಮತ್ತು ಬೀಜೋತ್ಪತ್ತಿ ಮಾತ್ರ. ಆದರೆ ಪ್ರಾಣಿಗಳ ಆತ್ಮಗಳು ಇವೆರಡರ ಜೊತೆಗೆ ವಾಸನಾತ್ಮಕ ಸಂಸ್ಕಾರಗಳನ್ನೂ (ಪ್ರತಿಭೆ, ಇಚ್ಛೆ ಮತ್ತು ತರ್ಕ), ಇಂದ್ರಿಯಾನುಭವಗಳನ್ನು ಪಡೆದಿರುತ್ತವೆ. ಮಾನವನ ಆತ್ಮಕ್ಕಾದರೋ ಇವೆಲ್ಲಕ್ಕಿಂತ ಬುದ್ಧಿಶಕ್ತಿ ಹಿರಿದಾದ್ದು. ಪಂಚೇಂದ್ರಿಯಗಳಿಂದ ಹುಟ್ಟಿದ ಆಕೃತಿಗಳನ್ನು ಸಂವಿಧಾನಗೊಳಿಸುವುದು ಬುದ್ಧಿಯ ಕೆಲಸ. ಪ್ರಕೃತಿಯಲ್ಲಿ ಬೇರೆ ಬೇರೆ ಅಂತಸ್ತಿನ ವಸ್ತುಗಳಿವೆ. ಆಯಾ ರೂಪಕ್ಕೆ ಅನುಗುಣವಾಗಿ ಪ್ರತಿಯೊಂದು ವಸ್ತುವೂ ಆಯಾ ಅಂತಸ್ತನ್ನು ಪಡೆಯುತ್ತದೆ. ಈ ಏಣಿಯ ತಳದಲ್ಲಿರುವುದು ಭೌತವಸ್ತುವೆಂದೂ ತುದಿಯಲ್ಲಿರುವುದು ಚೈತನ್ಯವೆಂದೂ ಅರಿಸ್ಟಾಟಲನ ಅಭಿಪ್ರಾಯ. ಪೃಥ್ವಿ ಅಫ್, ವಾಯು, ತೇಜಸ್ಸು, ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು ಹೀಗೆ ಕ್ರಮವಾಗಿ ಒಂದಕ್ಕಿಂತ ಒಂದು ಮೇಲಿನ ಅಂತಸ್ತಿನವು; ಕೆಳಗಿನ ಅಂತಸ್ತಿನ ವಸ್ತುಗಳು ಮೇಲಿನ ಅಂತಸ್ತಿನ ವಸ್ತುಗಳಿಗೆ ಆಧಾರಗಳು. ಹೀಗೆ ಪ್ರಕೃತಿಯಲ್ಲಿ ಕ್ರಮವಾದ ಏರಿಕೆ, ಹೊಂದಿಕೆ ಇದೆ. ಇನ್ನೂ ಮುಂದುವರಿದು ಭೂಮಿ, ಬೆಂಕಿ, ವಾಯು, ಬೆಳಕು ತಮ್ಮ ಸ್ವಭಾವವನ್ನು ಸಾಧಿಸಿಕೊಳ್ಳುವುದರ ಜೊತೆಗೆ ಜೀವಿಗಳಾದ ಸಸ್ಯ. ಪ್ರಾಣಿ ಮತ್ತು ಮನುಷ್ಯರ ಪ್ರಾಣಾಧಾರಗಳಾಗುತ್ತವೆಂದು ಕೂಡ ಅರಿಸ್ಟಾಟಲ್ ತರ್ಕಿಸಿದ್ದಾನೆ. ಅಂದಮಾತ್ರಕ್ಕೆ, ಮಾನವನೇ ಎಲ್ಲಕ್ಕೂ ಮೇಲಿನವೆಂದಲ್ಲ. ಆಕಾಶದ ಮಿತಿಯನ್ನು ಮೀರಿದ, ಶುದ್ಧ ಸತ್ತ್ವದಿಂದ ಕೂಡಿದ, ಎಲ್ಲಕ್ಕಿಂತಲೂ ಪರಿಪೂರ್ಣವಾದಂಥ ಪರಮ (ಈಶ್ವರ) ಎಂಬ ಅತ್ಯುತ್ತಮವಾದಂಥ ವಸ್ತು ಭೂಮಿಯಿಂದ ಆಚೆ ಇರುವುದೆಂದು ಅರಿಸ್ಟಾಟಲನ ಭಾವನೆ. ಹೀಗೆ ಪ್ರಕೃತಿಯಲ್ಲಿ ಮೆಟ್ಟಲು ಮೆಟ್ಟಲಾಗಿ ವಸ್ತುಗಳು ಪರಿಣಾಮಗೊಳ್ಳುತ್ತವೆಂದು ತಿಳಿಯಬಯಸಿದ್ದಾಯಿತು. ಈ ಪರಿಣಾಮಗಳು ಉಂಟಾಗುವ ಬಗೆಯನ್ನು ಒಂದು ಸಸ್ಯದ ಉದಾಹರಣೆಯಿಂದ ತಿಳಿಯಬಹುದು. ಒಂದು ಗಿಡಕ್ಕೆ ಬೀಜ ಉಪಾದಾನ ಕಾರನ ; ವೃಕ್ಷತ್ವ ಅದರ ಭಾವ ಅಥವಾ ರೂಪ ಕಾರಣ, ಬೀಜ ಉಪಾದಾನ ಕಾರಣ; ವೃಕ್ಷತ್ವ ಅದರ ಭಾವ ಅಥವಾ ರೂಪಕಾರಣ, ಬೀಜ ಮೊಳೆತು ಬೆಳೆಯುವುದಕ್ಕೆ ಮಣ್ಣು, ನೀರು, ವಾಯು, ಬೆಳಕು-ಇವೆಲ್ಲ ಸೇರಿ ನಿಮಿತ್ತ ಕಾರಣ. ಫಲಭರಿತವಾಗುವುದು ಅದರ ಗುರಿ ; ಅದು ಅದರ ಅಂತಿಮ ಕಾರಣ. ಈ ನಾಲ್ಕು ಕಾರಣಗಳಲ್ಲಿ ಯಾವುದೊಂದಿಲ್ಲದಿದ್ದರೂ ಯಾವುದೊಂದು ಸಸ್ಯವೂ ಸಂಪೂರ್ಣವಾಗಿ ವಿಕಾಸವಾಗಲಾರದು. ಹೀಗೆ ಆಧುನಿಕ ಜೀವಿಗಳ ವಿಕಾಸ ತತ್ತ್ವದ ನಿರೂಪಣೆಯ ದಿಕ್ಕಿಗೂ ಅರಿಸ್ಟಾಟಲ್ ಹೆಜ್ಜೆಯಿಟ್ಟಿದ್ದಂತೆ ಭಾಸವಾಗುತ್ತದೆ. ಇನ್ನಷ್ಟು ಕಾಲ ಜೀವಿಸಿದ್ದರೆ, ಅವನು ಈ ವಿಕಾಸದ ಹಾದಿಯನ್ನು ಹಸನು ಮಾಡುವುದರಲ್ಲೂ ಮೇಲುಗೈ ಪಡೆಯುತ್ತಿದ್ದನೆಂದು ತೋರುತ್ತದೆ. ಆದರೂ ಆತನ ರಮಣೀಯವಾದ ಪ್ರಕೃತಿ ತತ್ತ್ವನಿರೂಪಣೆ, ಚಿತ್ತಾಕರ್ಷಕ ಪ್ರಕೃತಿ ವಿಮರ್ಶೆ, ಶಾಸ್ತ್ರಾಧಾರ ವರ್ಗೀಕರಣ ಮತ್ತು ವೈಜ್ಞಾನಿಕ ರೀತ್ಯ ಜೀವಾಧ್ಯಯನ ಇವು ಬುದ್ಧಿಜೀವಿಗಳೆಲ್ಲರಿಗೂ ಅಚ್ಚರಿಯುಂಟುಮಾಡುತ್ತವೆ.

ಅರಿಸ್ಟಾಟಲನ ಅನಂತರ ಆತನ ಶಿಷ್ಯನಾದ ತೀಯೋಫ್ರಾಸ್ಟಸ್‍ನಿಂದ (ಕ್ರಿ.ಪೂ. 371-288) ಆ ಕಾಲದ ಸಸ್ಯ ಸಂಶೋಧನೆಯ ಸುಳಿವು ಗೊತ್ತಾಗುತ್ತದೆ. ಉಳಿದ ವಿಜ್ಞಾನಿಗಳಂತೆ ಈತ ಸಹ ಶಾಸ್ತ್ರೀಯ ನಾಮಗಳ ಸೃಷ್ಟಿಗಾಗಿ ಶ್ರಮಿಸಿದ. ಇವನು ಬಳಸಿದ ಶಾಸ್ತ್ರೀಯನಾಮಗಳ ಪೈಕಿ ಒಂದಾದ ಫಲಕವಚ (ಪೆರಿಕಾರ್ಪ್) ಎಂಬ ಪದ ಇವತ್ತಿಗೂ ಬಳಕೆಯಲ್ಲಿದೆ. ಈತ ಭ್ರೂಣಶಾಸ್ತ್ರಕ್ಕೆ ಮಹತ್ವವನ್ನು ನೀಡಿದಂತೆ ತೋರುತ್ತದೆ. ಸಸ್ಯಗಳ ಸರ್ವಾಂಗಗಳಲ್ಲೂ ಜೀವ ತುಂಬಿರುವುದರಿಂದ ಅವು ಮೊಳೆಯಬಲ್ಲವು. ಆದ್ದರಿಂದಲೇ ಅಂಗಗಳು ಹೇಗಿವೆ ಎನ್ನುವುದಕ್ಕೆ ಬದಲಾಗಿ ಅವು ಏನಾಗಿ ಬೆಳೆಯುತ್ತವೆ ಎಂಬುದು ಹೆಚ್ಚು ಮಹತ್ತ್ವದ್ದು ಎಂಬುದು ಆತನ ನಿಲುವು. ಸಸ್ಯಗಳ ಸಂತಾನಕ್ರಿಯೆಯ ವಿವಿಧ ಬಗೆಗಳಿಗೆ ಅವನು ಆದ್ಯತೆ ನೀಡಿದ್ದನಲ್ಲದೆ, ಏಕದಳ ಮತ್ತು ದ್ವಿದಳ ಸಸ್ಯಗಳಿಗಿರುವ ವ್ಯತ್ಯಾಸವನ್ನು ಸಸ್ಯಗಳಲ್ಲಿ (ಮುಖ್ಯವಾಗಿ ತೆಂಗಿನ ಜಾತಿಯವುಗಳಲ್ಲಿ) ಲಿಂಗಭೇದವನ್ನೂ ಗುರುತಿಸಿದ್ದ. ಒಟ್ಟಿನಲ್ಲಿ ತೀಯೋಫ್ರಾಸ್ಟಸನೇ ಸಸ್ಯ ಸಂಶೋಧನೆಗೆ ದಿಟ್ಟ ಹೆಜ್ಜೆಯಿಟ್ಟವರಲ್ಲಿ ಮೊಟ್ಟಮೊದಲಿಗೆ ಎಂದು ಹೇಳಬಹುದು. ಆತನ ಕೃತಿಗಳೆಲ್ಲವೂ ಅತ್ಯಮೂಲ್ಯವಾದವು ; ಸಸ್ಯಶಾಸ್ತ್ರದ ಪ್ರಾಚೀನ ಇತಿಹಾಸಕ್ಕೆ ಈತನ ಕೊಡುಗೆ ಸರ್ವಮಾನ್ಯವಾಗಿದೆ. ಈತ ನೀರೆರೆದು ಪೋಷಿಸಿದ ಈ ಶಾಸ್ತ್ರ ಈತನ ಮರಣಾನಂತರ ಬಹುಕಾಲದವರೆಗೆ ಮುಂದೆ ಬೆಳೆಯದೆ ನಿಂತುಹೋಗಿತ್ತು.

ಪ್ರಾಯೋಗಿಕ ಜೀವವಿಜ್ಞಾನಕ್ಕೆ ವಿಶೇಷ ಮಹತ್ತ್ವ ನೀಡಿ, ಜೀವವಿಜ್ಞಾನದ ಇತಿಹಾಸಕ್ಕೆ ಉತ್ಸಾಹ ತುಂಬಿದವರಲ್ಲಿ ಗೇಲೆನ್ (ಕ್ರಿ.ಶ. 130-200) ಎಂಬುವನಿಗೆ ಅಗ್ರಸ್ಥಾನ ಸಲ್ಲಬೇಕು. ಈತ  ಬರೆದ ಕೆಲವು ಗ್ರಂಥಗಳು ಹಾಳಾಗಿವೆ. ಉಳಿದಿರುವ ಕೃತಿಗಳಲ್ಲಿ ಈತ ಉಲ್ಲೇಖಿಸಿರುವ ಅನೇಕ ವಿಷಯಗಳು ಏಕರೀತಿಯಲ್ಲಿಲ್ಲ; ಖಚಿತವಾಗಿಲ್ಲ. ತರ್ಕವಿಲ್ಲದೆ ವಿಚಿತ್ರವಾಗಿ ಇವನು ಪಟ್ಟುಹಿಡಿದಿದ್ದ ಎರಡು ವಾದಗಳು ಇವನ ಗ್ರಂಥಗಳಲ್ಲಿವೆ. ವಾಯು, ಚೈತನ್ಯಗಳ ಹಳೆಯ ಕಲ್ಪನೆಯೇ ಮೊದಲಿನದು. ಉಸಿರೊಡನೆ ಒಳಸೇರುವ ವಿಶ್ವಜೀವೇ ವಾಯು. ಚೈತನ್ಯಗಳು ಮೂರು ; ಯಕೃತ್ತಿನಲ್ಲಿ ಸಹಜವಾಗಿರುವುದು ಒಂದು, ಹೃದಯದಲ್ಲಿ ಜೀವಾಳ ಸ್ವರೂಪದಲ್ಲಿ ಇರುವುದು ಎರಡನೆಯದು ಮತ್ತು ಪ್ರಾಣಿ ಸಂಬಂಧವಾದ (ಬುದ್ಧಿ) ಮಿದುಳಿನಲ್ಲಿರುವುದು ಮೂರನೆಯದು. ಜೀರ್ಣಗೊಂಡ ವಸ್ತು ಯಕೃತ್ತನ್ನು ಪ್ರವೇಶಿಸಿ ಅಲ್ಲಿರುವ ವಾಯು ಸಂಪರ್ಕದಿಂದ ಸ್ವಾಭಾವಿಕ ಚೈತನ್ಯವಾಗಿ ಮಾರ್ಪಾಟಾಗುತ್ತದೆಂದು ಈತ ಭಾವಿಸಿದ್ದ. ಈ ಸಹಜ ಚೈತನ್ಯ ಉಬ್ಬರವಿಳಿತವಿರುವ ಅಲೆಗಳ ರೂಪದಲ್ಲಿ ಹೃದಯದ ಬಲಹೃತ್ಕರ್ಣವನ್ನು ಮರು ಪ್ರವೇಶಿಸಿದಾಗ ಪುನಃ ಯಕೃತ್ತಿಗಾಗಲೀ ಮಿದುಳಿಗಾಗಲೀ ಸಾಗುತ್ತದೆಂದು ತಿಳಿದಿದ್ದ. ಯಕೃತ್ತಿಗೆ ಸಾಗುವಾಗ ಉದ್ಭವಿಸಿದ ಕಲುಷಿತ ಧೂಮ ಶ್ವಾಸಾಂಗಗಳ ಮೂಲಕ ಹೊರಬರುತ್ತದೆ. ಆದ್ದರಿಂದಲೇ ನಿಶ್ವಾಸವಾಯು ನಂಜುಕಾರಕವಾದದ್ದೆಂದು ಈತ ನಂಬಿದ್ದ ಹೃದಯವನ್ನು ತಲುಪಿದ ಉಳಿದ ಸಹಜ ಚೈತನ್ಯ ಎಡಹೃತ್ಕರ್ಣಕ್ಕೆ ಸೋರುತ್ತದೆಂದೂ ಅಲ್ಲಿ ವಾಯುವಿನೊಡನೆ ಮಿಳಿತವಾಗಿ ಪ್ರಾಣಿಚೈತನ್ಯ ಉತ್ಪತ್ತಿಯಾಗುವುದೆಂದೂ ಈತ ವಿವರಿಸಿದ. ಇದು ದೇಹದ ನಾನಾ ಭಾಗಗಳಿಗೆ ವಿತರಣೆಯಾಗುವುದಲ್ಲದೆ, ಮಿದುಳಿನ ನರಜಾಲದಲ್ಲಿ ಪ್ರಾಣಿಚೈತನ್ಯವಾಗಿ ರೂಪುಗೊಂಡು ನರಗಳ ಮೂಲಕ ವಿತರಣೆಯಾಗುವುದೆಂದು ಕಲ್ಪಿಸಿದ್ದಾನೆ.

ನಾಮಾನುಕ್ರಮದಲ್ಲೂ ಗೇಲೇನ್ ಸಾಕಷ್ಟು ಶ್ರದ್ಧೆ ವಹಿಸಿದ್ದ. ಆದರೆ ಒಂದೇ ಭಾಗಕ್ಕೆ ಬೇರೆ ಬೇರೆ ಹೆಸರನ್ನು ಸೂಚಿಸಿ ಗಲಿಬಿಲಿಯಾಗುವಂತೆ ಮಾಡಿದ್ದಾನೆ. ಆತನಿಟ್ಟ ಹೆಸರುಗಳು ಅಚ್ಚುಕಟ್ಟಾಗಿಲ್ಲ. ಆದರೂ ಅವನಿಟ್ಟ ಹೆಸರುಗಳಲ್ಲಿ ಹಲವಾರು ಈಗಲೂ ರೂಢಿಯಲ್ಲಿವೆ. ಅಪೊಪೈಸಿಸ್, ಎಪಿಪೈಸಿಸ್, ಟ್ರೋಕ್ಯಾಂಟರ್, ಡೈಆತ್ರ್ರೋಸಿಸ್, ಅನಾಸ್ಟಮೋಸಿಸ್ ಎಂಬ ಪದಗಳು ಅಂಗ ರಚನಾಶಾಸ್ತ್ರದಲ್ಲಿ ಇನ್ನೂ ಬಳಕೆಯಲ್ಲಿವೆ. ಆತನ ಸಂಶೋಧನೆಗಳಲ್ಲೆಲ್ಲ ಬೆನ್ನು ಹುರಿಯ ಕ್ರಿಯಾ ವಿಧಾನವನ್ನು ಕುರಿತದ್ದು ಪ್ರಖ್ಯಾತವಾದದ್ದು. ಬೆನ್ನುಹುರಿ ವಿವಿಧ ಖಂಡಗಳಲ್ಲಿ ಬಗೆಬಗೆಯ ಕ್ರಿಯಾವಿಧಾನವನ್ನು ನಿಯಂತ್ರಿಸುತ್ತದೆ. ಮೊದಲ ಮತ್ತು ಎರಡನೆಯ ಕಶೇರುಗಳ ನಡುವೆ ಅಪಾಯವಾದರೆ ತತ್‍ಕ್ಷಣ ಮರಣವೂ ಮೂರು ಮತ್ತು ನಾಲ್ಕನೆಯ ಕಶೇರುಗಳ ಮಧ್ಯೆ ಆಘಾತವಾದರೆ ಶ್ವಾಸೋಚ್ಛ್ವಾಸಕ್ಕೆ ಧಕ್ಕೆಯುಂಟಾಗುತ್ತದೆಂದೂ ಈತ ವರ್ಣಿಸಿದ್ದಾನೆ. ಆರನೆಯ ಕಶೇರುವಿಗಿಂತ ಕೆಳಗಿನವೇನಾದರೂ ಅಪಾಯಕ್ಕಿಡಾದರೆ ಅನುಕ್ರಮವಾಗಿ ಎದೆಗೂಡಿಗೆ, ಮೂತ್ರಕೋಶಕ್ಕೆ, ಕರುಳಿಗೆ ಹಾಗೂ ಕಾಲುಗಳಿಗೆ ಪಾಶ್ರ್ವವಾಯು ಸಂಭವಿಸುವುದೆಂದು ಈತ ಭಾವಿಸಿದ್ದ. ಆದರೆ ಗೇಲೆನ್ನನ ಈ ವಿಚಾರ 19ನೆಯ ಶತಮಾನದವರೆಗೂ ಬೇರೆ ವಿಜ್ಞಾನಿಗಳ ಲಕ್ಷ್ಯವನ್ನು ಸೆಳೆಯಲಿಲ್ಲ. ಅದುವರೆಗಿನ ಗ್ರೀಕ್ ದೇಹರಚನಾ ಗ್ರಂಥಗಳಲ್ಲಿದ್ದ ವಿಷಯಗಳೆಲ್ಲವನ್ನೂ ಒಂದು ಗೂಡಿಸಿ ಅಂಗರಚನಾ ವಿಧಾನ ಮತ್ತು ಮಾನವ ದೇಹದ ವಿವಿಧಾಂಗಗಳ ಉಪಯೋಗಗಳ ಬಗ್ಗೆ ಎಂಬ ಎರಡು ಗ್ರಂಥಗಳನ್ನು ನೀಡಿದ್ದೇ ಗೇಲೆನ್ನಿನಿಂದಾದ ಸೇವೆ. ಈತನ ಅನಂತರ ಹೆಚ್ಚು ಕಡಿಮೆ ಜೀವವಿಜ್ಞಾನದ ಅಂಧಯುಗ ಪ್ರಾರಂಭವಾಯಿತೆನ್ನಬೇಕು. ಮುಂದೆ 12 ಶತಮಾನಗಳ ಕಾಲ ಅರಬ್ಬರು ಜ್ಞಾನದ ಬೆಳೆವಣಿಗೆಯನ್ನು ಮುಂದುವರಿಸಿದರಾದರೂ ಅವೆಲ್ಲವೂ ಅರಬ್ಬೀ ಬಣ್ಣ ಪಡೆದ ಅರಿಸ್ಟಾಟಲ್, ಗೇಲೆನ್ನರ ತತ್ತ್ವಗಳೇ. ಅಂದರೆ, ಜೀವವಿಜಾÐನವನ್ನು ಅಸ್ತಿತ್ವಕ್ಕೆ ತರಲು ಇವರು ಆಧಾರಪುರುಷರಾದರು ; ಇವರ ಗ್ರಂಥಗಳೇ ಜನರಿಗೆ ವೇದಸಮಾನವಾಗಿದ್ದುದರಿಂದ ನಿಸರ್ಗವನ್ನು ನಿಜವಾದ ದೃಷ್ಟಿಯಿಂದ ನೋಡದೆ ಈ ಗ್ರಂಥಗಳ ಮೇಲೂ ಒಣ ಊಹೆ, ಟೀಕೆ ಟಿಪ್ಪಣಿಗಳನ್ನು ಕೇವಲ ತಾತ್ತ್ವಿಕ ಜಿಜ್ಞಾಸೆಯ ರೂಪದಲ್ಲಿ ಸ್ಪಷ್ಟಿಸಿದರು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯೇ ಬೇಡವೆಂದರು. ಗೇಲೆನ್ನನ ಅಭಿಪ್ರಾಯಗಳಿಗೆ ಎದುರಾಡಿದ ವೈದ್ಯರನ್ನು ಶಿಕ್ಷೆಗೆ ಗುರಿಮಾಡುತ್ತಿದ್ದರು. ಸರ್ವಜ್ಞಾನದಿಂದ ಕೂಡಿದ ಅರಿಸ್ಟಾಟಲನ ಕಾಲದಲ್ಲಿ ಜೀವಶಾಸ್ತ್ರ ವಿಶಾಲವಾಗಿಯೂ ಆಳವಾಗಿಯೂ ಹಬ್ಬಿ ವಿಶ್ವಕೋಶದಂತೆ ಮನ್ನಣೆ ಪಡೆದರೆ ಗೇಲೆನ್ನನ ಕಾಲದಲ್ಲಿ ಅತ್ಯುನ್ನತಿಗೇರಿತೇ ಹೊರತು ಈತನಿಗೆ ಸರಿಸಮನಾದ, ಪ್ರತಿಭಾಶಾಲಿಯಾದ ಶಿಷ್ಯವೃಂದದ ಸೃಷ್ಟಿಯಾಗದ ಕಾರಣ. ಗೇಲೆನ್ನನ ಮರಣಾನಂತರ (ಕ್ರಿ.ಶ. 200) ಪ್ರಕೃತಿವಿಜ್ಞಾನ ಕೊಂಚ ಕಾಲ ಮೂಲೆಗುಂಪಾಗಬೇಕಾಯಿತು.

(b) ಮಧ್ಯಕಾಲದಲ್ಲಿ ಜೀವವಿಜ್ಞಾನದ ಸ್ಥಿತಿಗತಿ ; ಗೇಲೆನ್ನನ ಕಾಲದಲ್ಲಿ ಉನ್ನತಿಗೇರಿದ್ದ ಜೀವವಿಜ್ಞಾನ ಅವನ ಬಳಿಕ ಮೂಲೆಗೆ ಬಿತ್ತಾದರು ಗ್ರೀಕರ ಗ್ರಂಥಗಳನ್ನು ಲ್ಯಾಟನ್ನಿಗೆ ಭಾಷಾಂತರಿಸುವ ಕಾಯ್ ಕ್ರಿ.ಶ. 11-13ನೆಯ ಶತಮಾನಗಳಲ್ಲಿ ಭರದಿಂದ ಸಾಗಿತು. ಆಗ ಪ್ರಕಟಗೊಂಡ ಆಲ್ಬರ್ಟಸ್ ಮ್ಯಾಗ್ನಸ್‍ನಿಂದ (ಸು. 1200-1280) ರಚಿತವಾದ ಗ್ರಂಥಗಳಿಂದ ಆ ಕಾಲದಲ್ಲಿ ಜನರಿಗಿದ್ದ ಸತ್ಯಾನ್ವೇಷಣೆಯ ಒಲವು ಅರಿವಾಗುವುದು. ಭಾಷಾಂತರಕಾರರಿಗಿಂತಲೂ ಕಲಾವಿದರು ಜೀವಾಧ್ಯಯನಕ್ಕೆ ಹೆಚ್ಚು ಒತ್ತಾಸೆ ಕೊಟ್ಟರು. ಲಿಯೊನಾರ್ಡೊಡ ವಿಂಚೀ (1452-1519) ಆಲ್ ಬ್ರೇಕ್ಟ್ ಡ್ಯೂಪರ್ (1471-1528), ಮೈಕೆಲ್ಯಾಂಜಲೊ (1475-1564) ಮೊದಲಾದ ಕಲಾವಿದರು ಜೀವಿಗಳ ರಚನಾಚಿತ್ರಗಳನ್ನು ವೀಕ್ಷಿಸಿದ್ದು ಕಲೆಗಾರರಾಗಿ ಮಾತ್ರವಲ್ಲ. ಇವರು ಮಾನವ ದೇಹದ ರಚನೆಯೆಡೆಗೂ ಗಮನ ಹರಿಸಿದರು. ಡ ವಿಂಚೀ ತನ್ನ ಜೀವಿತಕಾಲದಲ್ಲಿ ಬರೆದಿದ್ದ ಸುಮಾರು 750ಕ್ಕೂ ಮಿಗಿಲಾದ ಅಂಗರಚನೆಯ ಚಿತ್ರಗಳು 120 ಟಿಪ್ಪಣಿ ಪುಸ್ತಕಗಳೂ ದೊರೆತಿವೆ. ಆತ ಸತ್ತಮೇಲೆ ಅನೇಕ ಶತಮಾನಗಳ ಕಾಲ ರಚಿತವಾದ ಗ್ರಂಥಗಳಿಗಿಂತ ಡ ವಿಂಚೀಯ ಗ್ರಂಥಗಳೇ ಹರವು, ಖಚಿತತೆ ಚೆಲುವುಗಳಲ್ಲಿ ಮಿಗಿಲಾಗಿವೆ. ಅವನು ಹೊಸದಾಗಿ ಶೋಧಿಸಿದ ಅಂಶಗಳದ್ದೇ ಒಂದು ದೊಡ್ಡ ಪಟ್ಟಿ ಆಗುತ್ತದೆ. ಅವನ ಆನಂತರದ ವಿಜ್ಞಾನಿಗಳು ಅವನ್ನೆಲ್ಲ ಮತ್ತೆ ಕಂಡುಹಿಡಿದರು. ಆತ ತನ್ನ ಶೋಧನೆಗೆ ಹೆಚ್ಚಾಗಿ ನೆಚ್ಚಿದ್ದು ಪುಸ್ತಕಗಳಿಗಿಂತಲೂ ನಿಸರ್ಗವನ್ನೇ. ಮುದ್ರನ ಸೌಲಭ್ಯವೂ ಇದ್ದುದರಿಂದ ಡ ವಿಂಚೀಯ ಅದ್ಭುತ ಸಾಧನೆ ಮತ್ತು ಚೇತನಗಳು ಆತನ ಅನಂತರ ಬಂದ ವೆಸೇಲಿಯನ್ ಮುಂತಾದ ವಿಜ್ಞಾನಿ ವರೇಣ್ಯರಿಗೂ ದೊರೆಯುವಂತಾಗಿ ಅವರ ಮೇಲೆ ಪ್ರಭಾವ ಬೀರಿದುವು.

(ಛಿ) ಜೀವಾಧ್ಯಯನದ ಪುನರುಜ್ಜೀವನ ; ಕಾಲಕ್ರಮೇಣ ಜೀವವಿಜ್ಞಾನವನ್ನು ಕುರಿತ ಪಠ್ಯಪುಸ್ತಕಗಳು ಪ್ರಕಟವಾದುವು. ಈ ದಿಸೆಯಲ್ಲಿ ಜರ್ಮನಿಯ ಸಸ್ಯ ಶಾಸ್ತ್ರಜ್ಞರ ಮುನ್ನಡೆ ಗಮನಾರ್ಹವಾದ್ದು. ಆಟೊ ಬ್ರುನ್ಫೆಲ್ಸ್ (1488-1534) ಸಸ್ಯಶಾಸ್ತ್ರದ ಪುಸ್ತಕವನ್ನು ಹೊರ ತಂದುವುರಲ್ಲಿ ಮೊಟ್ಟಮೊದಲಿಗ. ಆಧುನಿಕ ಗ್ರಂಥಗಳಿಗೆ ಸರಿಸಮನಾದ ಈತ ಪುಸ್ತಕದಲ್ಲಿ ಗಿಡಮರಗಳ ಸ್ಥೂಲರಚನೆಯ ಸಚಿತ್ರ ವರ್ಣನೆಯನ್ನು ಕಾಣಬಹುದು. 1542ರಲ್ಲಿ ಹೊರತಂದ ಲಿಯೋನಾರ್ಡ್ ಪೂಕ್ಸ್‍ನ ಪುಸ್ತಕ ಪ್ರಕೃತಿ ಜ್ಞಾನದ ಬಗ್ಗೆ ಇರುವ ಶ್ರೇಷ್ಠ ಕೃತಿಯೆಂದು ಪರಿಗಣಿತವಾಗಿದೆ.

ಅಂಗರಚನಾಶಾಸ್ತ್ರದಲ್ಲಿ ಆಗ ಅಗ್ರಗಣ್ಯರೆನಿಸಿದ್ದ ಆಂಡ್ರಿಯಾಸ್ ವೆಸೇಲಿಯಸ್ ಮತ್ತು ಬಾರ್ತಲೋಮಿಯೋ ಯೂಸ್ಟೇಕಿಯೋ ಎಂಬಿಬ್ಬರು ತಂತಮ್ಮ ಪರಿಜ್ಞಾನ ಮತ್ತು ಸತ್ಯಾನ್ವೇಷಣೆಯ ಆಸಕ್ತಿಗಳಿಂದ ಜೀವವಿಜ್ಞಾನಕ್ಕೆ ಹೊಸ ಕಳೆಯನ್ನು ತುಂಬಿದರು. ವೆಸೇಲಿಯಸ್ಸನ ಹ್ಯೂಮಾನಿ ಕಾರ್ಪೋರಿಸ್ ಫ್ಯಾಬ್ರಿಕ (ಮಾನವನ ಮೈಯ ರಚನೆ) ಎಂಬ ಜಗತ್ಪ್ರಸಿದ್ಧ ಪುಸ್ತಕದಿಂದಾಗಿ ಮಾನವ ದೇಹದ ರಚನೆಯನ್ನು ಅಂದವಾದ ಮತ್ತು ಖಚಿತವಾದ ಚಿತ್ರಗಳ ಮೂಲಕ ಮೊದಲಬಾರಿಗೆ ಕಾಣುವಂತಾಯಿತು. ದೇಹದ ಹಲವಾರು ಭಂಗಿಗಳು ದೈನಂದಿನ ಜೀವನದ ಸಹಜ ಪರಿಸರಗಳಲ್ಲಿ ಎದ್ದು ಕಾಣುವಂತೆ ಅನೇಕ ಚಿತ್ರಗಳನ್ನು ಈತ ಬರೆದಿದ್ದಾನೆ. ವಿವರಗಳ ಖಚಿತತೆಯಲ್ಲಿ ವೆಸೇಲಿಯಸ್ಸನನ್ನು ಮೀರಿಸಿದವ ಯೂಸ್ಟೇಕಿಯೋ. ದೇಹಗಳಲ್ಲಿ ಕಾಣಬರುವ ರಚನಾವೈವಿಧ್ಯವನ್ನು ತೋರಿಸಿ ಕೊಟ್ಟವರಲ್ಲಿ ಇವನೇ ಮೊಟ್ಟಮೊದಲಿಗ. ಅಂಗರಚನೆಯ ಪುಸ್ತಕದ ಕೃತಿಕಾರ ಈತ. ಇವನು ಸತ್ತ 140 ವರ್ಷಗಳ ತನಕ ಈತ ಬರೆದನೆನ್ನಲಾದ ಅನೇಕ ಚಿತ್ರಗಳು ಬೆಳಕು ಕಾಣಲಿಲ್ಲ. ಗಂಟಲು ಕಿವಿಗಳ ನಡುವೆ ಇರುವ ಆಲಿಕೆಯ ಕೊಳವೆಗೆ ಇವನ ಹೆಸರನ್ನೇ ಕೊಡಲಾಗಿದೆ. ಅನುವೇದನ ನರಮಂಡಲದ ಚಿತ್ರಗಳನ್ನು ಈತ ಅಮೋಘವಾಗಿ ಬಿಡಿಸಿದ್ದಾನೆ.

ಶುದ್ಧ ನಿಸರ್ಗತಜ್ಞರೆಂದು ಹೆಸರುವಾಸಿಯಾದ ಪಿಯೆರ್ ಬೆಲಾನ್ ಮತ್ತು ಗಿಲಾಮೆ ರೊಂಡಲೆಯವರಿಂದಾಗಿ ಅಸ್ಥಿಯ ತುಲನಾಧ್ಯಯನ, ಮೀನು ಮತ್ತು ಪಕ್ಷಿಗಳ ವೀಕ್ಷಣಾ ವರದಿಗಳು ಪುಸ್ತಕ ರೂಪದಲ್ಲಿ ಕಾಣಬಂದವು. ಪ್ರಾಣಿಗಳ ಅಧ್ಯಯನಕ್ಕೆ ಅಸ್ತಿಭಾರವನ್ನಿಟ್ಟ ಕಾನ್ರಾಡ್ ಫಾನ್ ಜೆಸ್ನರನು ಚತುಷ್ಟಾಧಿಗಳು, ಪಕ್ಷಿಗಳು, ಮೀನು ಮತ್ತು ಉರಗಗಳನ್ನು ಕುರಿತು ಬೃಹದ್ಗ್ರಂಥಗಳನ್ನು ರಚಿಸಿದ್ದಾನೆ. ಸಸ್ಯಸಂಬಂಧವಾದ ಕೃತಿಗಳು ಬರೆದಿದ್ದರೂ ಈತ ಸತ್ತು 200 ವರ್ಷಗಳಾಗುವ ವರೆಗೆ ಅವಾವುವೂ ಪ್ರಕಟವಾಗಲಿಲ್ಲ. 16ನೆಯ ಶತಮಾನದ ಅಂತ್ಯದ ವೇಳೆಗೆ ಜೀವವಿಜ್ಞಾನದ ವಿವಿಧಾಂಗಗಳಿಂದ ಅಂಗರಚನಾಶಾಸ್ತ್ರ ಶರೀರವಿಜ್ಞಾನ, ಸಸ್ಯಶಾಸ್ತ್ರ ಮತ್ರು ಪ್ರಾಣಿಶಾಸ್ತ್ರಗಳು ಕ್ರಮವಾಗಿ ರೂಪುಗೊಂಡುವು.

ವೆಸೇಲಿಯಸ್ಸನ ಮರಣಾನಂತರ ಆತನ ಶಿಷ್ಯನಾದ ರಿಯೊಲ್ಡೊ ಕೊಲಂಬೊ (1516-59) ಎಂಬುವನು ರಸಿಕೆಯ ಪೊರೆ, ಕಣ್ಣು ಮತ್ತು ಪುಪ್ಪುಸಗಳ ತಿಳಿವಳಿಕೆಯನ್ನು ಹೆಚ್ಚಿಸಿದ. ಅನಂತರ ಮೊಡೀನಾದ ಕ್ರೈಸ್ತ ಧರ್ಮಾಧಿಕಾರಿ ಗೇಬ್ರಿಯೆಲೊ ಫೆಲೋಪಿಯಸ್ (1523-62) ಎಂಬಾತ ದೇಹರಚನಾಶಾಸ್ತ್ರದ ಖಚಿತತೆಯನ್ನು ಹೆಚ್ಚಿಸಿದ. ಹೆಣ್ಣಿನ ಅಂಡನಾಳದ ಮುಂತುದಿಗೆ ಈತನ ಹೆಸರನ್ನೇ ಇನ್ನೂ ಬಳಸುತ್ತಿದ್ದಾರೆ. ತನ್ನ ಕಾಲದಲ್ಲಿ ಅತಿ ಹೆಚ್ಚಿನ ಪಸಿದ್ಧಿ ಪಡೆದ ಹೀರಾನಿಮಸ್ ಫೆಬ್ರಿಸಿಯಸ್ (ಸು. 1553-1619 ಭ್ರೂಣಶಾಸ್ತ್ರ, ಶರೀರವಿಜ್ಞಾನ ಮತ್ತು ರಚನಾಶಾಸ್ತ್ರಗಳ ಬಗ್ಗೆ ಪುಸ್ತಕ ಬರೆದ. ಆಪೆರ ಆಮ್ನಿಯದ ಕೃತಿಕಾರನಾತ ಈತ ತಾಮ್ರದ ತಗಡುಗಳ ಮೇಲೆ ಚಿತ್ರಗಳನ್ನು ಕೆತ್ತುವುದರಲ್ಲೂ ಅಗ್ರಗಣ್ಯನೆನಿಸಿದ. ರಕ್ತಾಭಿಸರಣಿಯನ್ನು ಪರಿಶೋಧಿಸಿದ ವಿಲಿಯಮ್ ಹಾರ್ವೆ ಫೆಬ್ರಿಸಿಯಸ್ಸನ ಮನೆಯಲ್ಲೇ 4 ವರ್ಷಕಾಲ ಇದ್ದುಕೊಂಡು ರಕ್ತಪರಿಚಲನೆ ಮತ್ತು ಭ್ರೂಣಶಾಸ್ತ್ರಗಳನ್ನು ಅಭ್ಯಸಿಸಿದ. ಹೃದಯದ ಬಡಿತ, ನಾಡಿ, ರಕ್ತಸುರಿಕೆ ಇತ್ಯಾದಿ ಬಿಡಿ ವಿಷಯಗಳ ಹಿಂದೆ ಇರುವ ಸಾಮಾನ್ಯ ಸೂತ್ರಗಳನ್ನು ಹಾರ್ವೆ ಕಂಡುಕೊಂಡ. ಮೈಯಲ್ಲಿ ಅಪಧಮನಿಗಳ ಮತ್ತು ಅಬಿಧಮನಿಗಳ (ಸಿರಗಳ) ಕೊನೆಕುಡಿಗಳನ್ನು ಕೂಡಿಸುವ ಅಪಾರ ಜಾಲರಚನೆಯನ್ನು ಹಾರ್ವೆ ಕಾಣದಿದ್ದರೂ ಅದು ಇದ್ದಿರಬೇಕೆಂದು ಊಹಿಸಿದ್ದ. ನಿಜವಾಗಿಯೂ ಆ ಜಾಲರಚನೆಯನ್ನು ಮುಂದೆ ಕಂಡ ವ್ಯಕ್ತಿಯೊಬ್ಬ ಇಟಲಿಯಲ್ಲಿ ಹುಟ್ಟಿದ. 32 ವರ್ಷ ವಯಸ್ಸಿನ ಮಾರ್ಸೆಲೊ ಮಾಲ್ಫೀಗಿ ಎಂಬಾತ ಬೊಲೊನಾ ಬಳಿಯ ಒಂದು ಬೆಟ್ಟದ ತಪ್ಪಲಿನಲ್ಲಿ ನಿಂತು ಸಂಜೆ ಗೆಂಪಿಗೆದುರಾಗಿ ಕಪ್ಪೆಯ ಪುಪ್ಪಸದ ಒಂದು ಚೂರನ್ನು ಹಿಡಿದು ಪರೀಕ್ಷಿಸಿ ಧಮನಿಗಳ ಮತ್ತು ಸಿರಗಳ ಕೊನೆಕುಡಿಗಳನ್ನು ಕಣ್ಣಾರೆ ಕಂಡ. ರಕ್ತ ತುಂಬಿರುವ ಪುಟಾಣಿ ಲೋಮನಾಳಗಳು ಈ ಕುಡಿಗಳನ್ನು ಒಂದುಗೂಡಿಸುವುದನ್ನೂ ಮೊಟ್ಟಮೊದಲಿಗೆ ಭೂತಗನ್ನಡಿಯ ಸಹಾಯದಿಂದ ಈತ ಕಂಡ.

ಜೀವಿಗಳ ಅಂಗಗಳ, ಮತ್ತು ವಿವಿಧ ಭಾಗಗಳ ನವುರಾದ ರಚನಾವಿನ್ಯಾಸಗಳು ಮುಂತಾದ ಇತರ ಸೋಜಿಗಳ ತಿಳಿವಳಿಕೆ ಹೆಚ್ಚಾದದ್ದು ಸೂಕ್ಷ್ಮದರ್ಶಕದ ಉಪಜ್ಞೆಯಿಂದ. ಈ ರಚನೆಗೆ ಮಾರುಹೋದ ವಿಜ್ಞಾನಿಗಳಲ್ಲಿ ಮಾಲ್ಫೀಗಿಯೂ ಒಬ್ಬ. ಇದರ ನೆರವಿನಿಂದಲೇ ಶರೀರವಿಜ್ಞಾನ, ಅಂಗರಚನಾಶಾಸ್ತ್ರ ಹಾಗೂ ಭ್ರೂಣಶಾಸ್ತ್ರಗಳಿಗೆ ಹಲವಾರು ಹಿರಿಯ ಕೊಡುಗೆಗಳನ್ನು ಈತ ಕೊಟ್ಟ. ವಾಯುಗೂಡುಗಳು, ರಕ್ತದಿಂದ ಬೇರ್ಪಟ್ಟಿರುವ ಪುಪ್ಪುಸಗಳ ರಚನೆ, ಲೋಮನಾಳಗಳಲ್ಲಿ ರಕ್ತದ ಚಲನೆ ; ಮೇಲ್ಚರ್ಮದ ಮೊಳೆಯುವ ಪದರ ; ಮೂತ್ರ ಪಿಂಡದ ಗೋಳಕಗಳು ; ಗುಲ್ಮದ ಕಿಗ್ಗಂಟುಗಳು ; ನಾಲಗೆಯ ಲಕ್ಷಣಗಳು ; ಕೋಳಿಯ ಬೆಳೆವಣಿಗೆಯ ಪ್ರಥಮ ಹಂತಗಳು ; ಸಸ್ಯಗಳ ಕೋಶಭಿತ್ತಿಯ ಸ್ಥೂಲ ಪರಿಚಯ ಮತ್ತು ಬೇರು ಹಾಗೂ ಕಾಂಡಗಳ ಸೂಕ್ಷ್ಮ ರಚನೆಗಳ ಅರಿವಾದದ್ದು ಮಾಲ್ಫೀಗಿಯ ಸಂಶೋಧನೆಯಿಂದಾಗಿ. ಇಂಗ್ಲೆಂಡಿನ ನಿಹೀಮಿಯ ಗ್ರ್ಯೂ (1641-1712) ಎಂಬಾತ ಸಸ್ಯಗಳಲ್ಲಿ ಲಿಂಗಭೇದವನ್ನು ಗುರುತಿಸಿದ. ಕೀಟಗಳ ರೂಪಪರಿವರ್ತನೆ ಮತ್ತು ಬೆಳೆವಣಿಗೆಯನ್ನು ಅರಿಯಲು ಶ್ರಮವಹಿಸಿದವನೆಂದರೆ ಜಾನ್ ಸ್ವಾಮರ್ಡಾಮ್ (1637-80). ಇವನ ಕೆಲಸವೆಲ್ಲ ಬಹುವಾಗಿ ಕೀಟಗಳ ಜೀವನದ ಸೂಕ್ಷ್ಮ ರಚನೆಗಳನ್ನು ಬಿಡಿಸುವುದಾಗಿದ್ದರೂ ಈತ ರಕ್ತಕಣಗಳನ್ನೂ ಮೊಟ್ಟಮೊದಲ ಬಾರಿಗೆ ವಿವರಿಸಿದ.

ಸೂಕ್ಷ್ಮದರ್ಶಕದ ಮಹದುಪಯೋಗ ಪಡೆವನೆಂದರೆ ಆಂಟನ್ ಫಾನ್ ಲ್ಯೂವೆನ್ ಹೂಕ್ (1635-1703). ಕಿರಿ ಅಭಿ ಮತ್ತು ಅಪಧಮನಿಗಳ ನಡುವೆ ಇರುವ ಲೋಮನಾಳಗಳ ಜೋಡನೆಯ ಕ್ರಮವನ್ನು ಮೊಟ್ಟಮೊದಲಿಗೆ ತೋರಿಸಿದಾತ ಈತ. ಕೆಂಪು ರಕ್ತಕಣಗಳ ಬಗ್ಗೆ ಸ್ವಾಮರ್‍ಡಾಮ್ ನಡೆಸಿದ ವಿಮರ್ಶಾತ್ಮಕ ವಿಚಾರವನ್ನು ಮುಂದುವರಿಸಿ, ಉರಗಗಳ ಹೊರತಾಗಿ ಎಲ್ಲ ಕಶೇರುಕಗಳಿಗೂ ಅನ್ವಯಿಸಿದ. ಮಾಂಸಖಂಡಗಳಲ್ಲಿ ಅಡ್ಡಪಟ್ಟೆಯಿರುವುದು ; ಹೃದಯದ ಮಾಂಸಖಂಡಗಳು ಕವಲೊಡೆದಿರುವ ಲಕ್ಷಣ ; ಹರಳಾಕೃತಿಯಲ್ಲಿರುವ ಕಣ್ಣಿನ  ಮಸೂರದ ರಚನೆ ; ಶಿಲಕೆಗಳ ಕಾರ್ಯ ಮತ್ತು ಅವುಗಳ ಸ್ಥಾನ; ಸಸ್ತನಿಗಳ ರೇತ್ರ ರೂಪ ; ದಂಡಾನುಗಳ ವಿಮರ್ಶೆ-ಇವೆಲ್ಲ ಲ್ಯೂವೆನ್ ಹೂಕನ ಕೊಡುಗೆಗಳು. ಆನಂತರ ಬಂದ ವಿಜ್ಞಾನಿಗಳಲ್ಲಿ ಪ್ರಮುಖನಾದವ ರಾಬರ್ಟ್ ಹೂಕ್ (1635-1708). ಇವನು ಬಿರಡೆಯ ಅಡ್ಡಕೊಯ್ತಗಳನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ, ಅವುಗಳಲ್ಲಿ ಜೇನುಗೂಡಿನಂತಿರುವ ಸಣ್ಣಕೋಣೆಗಳಿರುವುದನ್ನು ಚಿತ್ರರೂಪದಲ್ಲಿ ವಿವರಿಸಿ. ಅವನ್ನು ಜೀವಕೋಶಗಳೆಂದು ಕರೆದ. ಹೀಗೆ ಜೀವಕೋಶಗಳನ್ನು ಪ್ರಥಮಬಾರಿಗೆ ಆವಿಷ್ಕರಿಸಿದ ಕೀರ್ತಿ ಈತನಿಗೆ ಸಲ್ಲಬೇಕು. ಚುರುಚುರಕೆ ಗಿಡದ ಚುಚ್ಚುಕೋಶಗಳ ವಿವರಣೆ, ಒದ್ದೆಯಾದ ಎಲೆಯ ಮೇಲೆ ಶಿಲೀಂಧ್ರದ ಬೆಳೆವಣಿಗೆ ; ಹಾವಸೆಯ ರಚನಾ ವಿನ್ಯಾಸ ; ಮುಟ್ಟಿದರೆ ಮುನಿ ಗಿಡದ ಮೇಲಿನ ಪ್ರಯೋಗಗಳು ಹೇನು ಮತ್ತು ಚಿಗಟುಗಳ ಚಿತ್ರಗಳು ; ನೊಣದ ಸಂಯುಕ್ತಾಕ್ಷಿ ಮತ್ತು ನುಸಿಯ (ನ್ಯಾಟ್) ಜೀವನಚರಿತ್ರೆ-ಇವು ಹೂಕನ ವಿಶಿಷ್ಟ ಕೊಡುಗೆಗಳು.

ಜೀವವಿಜ್ಞಾನಿಗಳು ಮೊದಮೊದಲು ಜೀವಿಗಳ ವರ್ಗೀಕರಣಕ್ಕೆ ಅಷ್ಟಾಗಿ ಲಕ್ಷ್ಯವೀಯಲಿಲ್ಲ. ಪ್ರಾಣಿಗಳನ್ನು ಮೀನು, ಪಕ್ಷಿ, ಉರಗ ಮುಂತಾದ ಗುಂಪುಗಳಾಗಿ ಜೆಸ್ನರ್ ವಿಂಗಡಿಸಿದ್ದ. ಎಲೆಗಳ ಆಕಾರದ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಲು ತೊಡಗಿದವನೆಂದರೆ ಮ್ಯಾಥಿಯಾಸ್ ಡ ಲೋಬೆಲ್ (1538-1616) ಎಂಬ ಡಚ್ ವಿಜ್ಞಾನಿ. ಹುಲ್ಲುಗಳನ್ನು ಈತ ಸಾಕಷ್ಟು ಚೆನ್ನಾಗಿ ವಿಂಗಡಿಸಿದರೂ ಏಕ ಮತ್ತು ದ್ವಿದಳ ಸಸ್ಯಗಳ ಜೋಡಣೆಯಲ್ಲಿ ಮಾತ್ರ ವಿಫಲನಾದ. ಫಲಪುಷ್ಪಗಳೇ ಆಧರಿಸಿ ಶ್ರೇಷ್ಠ ವರ್ಗೀಕರಣಕ್ಕೆ ಅಡಿಗಲ್ಲಿಟ್ಟವ ಪಾಡುವಾದ ಆ್ಯಂಡ್ರಿಯಾಸ್ ಸೀಸಾಲ್ಪಿನಸ್ (1519-1603). ಆನಂತರ ಬೇಸಲ್ಲಿನ ಗ್ಯಾಸ್ಪರ್ಡ್ ಬಾಹಿನ್ (1550-1624) ಎಂಬಾತ ಹೆಚ್ಚು ಕಡಿಮೆ ಸೀಸಾಲ್ಪಿನೋನ ಕ್ರಮವನ್ನೇ ಅನುಸರಿಸಿ ಸುಮಾರು 6000 ಸಸ್ಯಗಳನ್ನು ವರ್ಗೀಕರಿಸಿದ. ಸಸ್ಯಗಳ ವಿವಿಧ ಪ್ರಭೇದಗಳನ್ನು ಜಾತಿಗಳಾಗಿ ಮೊಟ್ಟ ಮೊದಲಿಗೆ ವಿಂಗಡಿಸಿದವನು ಇವನೇ. ಆದರೆ ಇಡೀ ಜೀವರಾಶಿಯನ್ನು ವೈಜ್ಞಾನಿಕ ರೀತ್ಯ ಜೋಡಿಸಲು ದಿಟ್ಟ ಹೆಜ್ಜೆಯಿಟ್ಟವನು ಜಾನ್ ರೇ (1627-1705) ಮತ್ತು ಫ್ರಾನ್ಸಿಸ್ ವಿಲುಗ್ಬಿ (1635-72) ಎಂಬ ಇಬ್ಬರು ಸ್ನೇಹಿತರು. ಪ್ರಾಣಿಗಳ ವಿಂಗಡಣೆಯಲ್ಲಿ ನಿರತನಾಗಿದ್ದ ವಿಲುಗ್ಬಿ ಅಕಾಲ ಮೃತ್ಯುವಿಗೆ ಬಲಿಯಾದ್ದರಿಂದ, ರೇ ಒಬ್ಬನೇ ವರ್ಗೀಕರಣಶಾಸ್ತ್ರದ ಅಧ್ಯಯನವನ್ನು ಮುಂದುವರಿಸಿದ. ಮೊಗ್ಗುಗಳ ನೈಜಸ್ವರೂಪವನ್ನು ವಿವರಿಸಿರುವುದಲ್ಲದೆ, ಫಲಪುಷ್ಪಗಳ ಜೊತೆಗೆ ಪತ್ರಗಳನ್ನು ಪರಿಶೀಲಿಸಿ ಏಕ ಮತ್ತು ದ್ವಿದಳ ಸಸ್ಯಗಳ ನಿರೂಪಣೆಯನ್ನು ಸಸ್ಯಗಳ ನವ್ಯ ವ್ಯವಸ್ಥೆ ಎಂಬ ಪುಸ್ತಕದಲ್ಲಿ ಈತ ಪ್ರಕಟಿಸಿದ್ದಾನೆ (1682). ಅಂತೆಯೇ, ಬೆರಳು ಮತ್ತು ಹಲ್ಲುಗಳನ್ನು ಆಧರಿಸಿ ಪ್ರಾಣಿಗಳ ವರ್ಗೀಕರಣ ಕ್ರಮವನ್ನು ಚತುಷ್ಟಾದಿ ಮತ್ತು ಸರ್ಪಗಳ ಸಾರಸಂಗ್ರಹದಲ್ಲಿ (ಸೈನಾಪ್ಸಿಸ್ ಆಫ್ ಕ್ವಾಡ್ರಪೆಡ್ಸ್ ಅಂಡ್ ಸರ್ಪೆಂಟ್ಸ್ 1693) ವಿವರಿಸಿದ್ದಾನೆ. ಸುವ್ಯವಸ್ಥಿತ ರೀತಿಯಲ್ಲಿ ಜೀವಿಗಳನ್ನು ವರ್ಗೀಕರಿಸಿದ ಕೀರ್ತಿ ಲಿನಿಯಸ್‍ನಿಗೆ (1707-78) ಸಲ್ಲುತ್ತದೆ. ಆ ಕಾಲದ ಸರ್ವೋತ್ತಮ ಹಾಗೂ ನಿಷ್ಠಾವಂತ ಗುರುಗಳನ್ನು ಪಡೆದಿದ್ದ ಲಿನಿಯಸ್ಸನು ಸ್ವತಃ ಉತ್ತಮ ಬೋಧಕನಾಗಿದ್ದನಲ್ಲದೆ ಆತ್ಯಾಸಕ್ತ ಶಿಷ್ಯಕೋಟಿಯುಳ್ಳ ಅದೃಷ್ಟಶಾಲಿಯೂ ಆಗಿದ್ದ. ಆದ್ದರಿಂದಲೇ ಇವನು ಜೀವವಿಜ್ಞಾನದ ಒಂದು ಬಗೆಯ ಸರ್ವಾಧಿಕಾರಿಯಾಗಿದ್ದಂತೆ ತೋರುತ್ತದೆ. ಬಾಹಿನ್ ಮತ್ತು ರೇ ಮುಂತಾದವರ ವರ್ಗೀಕರಣ ಪದ್ಧತಿಯಿಂದ ಪ್ರಭಾವಿತನಾಗಿ, ಲೀನಿಯಸ್ಸನು ಪ್ರತಿಯೊಂದು ಜೀವಿಗೂ ಎರಡೂ ಹೆಸರನ್ನಿತ್ತು-ಮೊದಲನೆಯದು ಜಾತಿಯನ್ನೂ ಎರಡನೆಯದು ಪ್ರಭೇದವನ್ನೂ ಸೂಚಿಸುವಂತೆ-ದ್ವಿನಾಮ ನಾಮಕರಣ ವಿಧಾನವನ್ನು ಜಾರಿಗೆ ತಂದದ್ದರಿಂದ, ಅದುವರೆಗೂ ಕೇವಲ ಕಲ್ಪನೆ ಮತ್ತು ಗೊಂದಲಕ್ಕೆ ಸಿಕ್ಕಿಬಿದ್ದಿದ್ದ ವರ್ಗೀಕರಣಶಾಸ್ತ್ರ ಅಂದಿನಿಂದ ವೈಜ್ಞಾನಿಕ ಮಿರುಗನ್ನು ತಳೆಯಿತು. ಅನೇಕಾವರ್ತಿ ಮುದ್ರಿಸಲ್ಪಟ್ಟ ಈತನ ಸಿಸ್ಟಮಾ ನೇಚುರೇ ಎಂಬ ಪುಸ್ತಕದ 10ನೆಯ ಆವೃತ್ತಿ ಪ್ರಾಣಿಗಳ ಮತ್ತು 12ನೆಯ ಆವೃತ್ತಿ ಸಸ್ಯಗಳ ಜಾತಿಭೇದಗಳನ್ನರಿಯಲು ಪ್ರಮುಖವಾದದ್ದೆಂದು ಇಂದಿಗೂ ಪರಿಗಣಿತವಾಗಿವೆ. ಪ್ರಭೇದಗಳು ಅಚಲ ಹಾಗೂ ಅಭಿನ್ನವಾದವೆಂದು ಈತ ನಂಬಿದ್ದ. ಒಂದು ಜೊತೆ ಜೀವಿಗಳ ಸಂತತಿಗಳೆಲ್ಲವೂ ಒಂದು ಪ್ರಭೇದವಾಗಿ ಬೆಳೆಯುವುವೆಂದು ಈತನ ಭಾವನೆ. ಕಾಲಗತಿಸಿದಂತೆ ಈ ನಿರೂಪಣೆಯನ್ನು ಬದಲಾಯಿಸಿ, ಜಾತಿಗಳು ಭಗವಂತನ ಸೃಷ್ಟಿಯೆಂದು ಈತ ಹೇಳಿದ.

(ಜ) ತುಲನಾತ್ಮಕ ಅಂಗರಚನಾಶಾಸ್ತ್ರ ಮತ್ತು ಶರೀರವಿಜ್ಞಾನ : ವಿವಿಧ ಜೀವಿಗಳ ಅಂಗರಚನೆ, ಕ್ರಿಯಾಶೀಲತೆ ಮುಂತಾದವುಗಳ ಸಾಮ್ಯಾಸಾಮ್ಯತೆಗಳ ಅಭ್ಯಾಸ 16ನೆಯ ಶತಮಾನದಿಂದೀಚೆಗೆ ಆರಂಭವಾಯಿತು. 1543ರಲ್ಲಿ ವೆಸೇಲಿಯಸ್ ಮಾನವನ ದೇಹವನ್ನು ವಿಚ್ಛೇದಿಸಿ, ಅಂಗರಚನೆಯ ಬಗ್ಗೆ ವಿವರಣೆಗಳನ್ನು ಕೊಟ್ಟ. ಹನ್ನೆರಡು ವರ್ಷಗಳ ಆನಂತರ, ಪಿಯರ್ ಬೆಲಾನನು ಪಕ್ಷಿ ಮತ್ತು ಮಾನವನ ಕಂಕಾಲದ ಎಲುಬುಗಳನ್ನು ಅಧ್ಯಯನ ಮಾಡಿ, ವಿವಿಧ ಎಲುಬುಗಳು ಒಂದೇ ಬಗೆಯಲ್ಲಿ ಅಳವಟ್ಟಿರುವುದನ್ನು ಮೊದಲ ಬಾರಿಗೆ ತೋರಿಸಿದ. ಈ ಬಗೆಯ ತುಲನಾಧ್ಯಯವನ್ನು ಗಯಟೆ, ಓಕೆನ್ ಮೊದಲಾದವರು ತಾತ್ತ್ವಿಕವಾಗಿ ಹಾಗೂ ವಿವರಣಾತ್ಮಕವಾಗಿ 19ನೆಯ ಶತಮಾನದ ವರೆಗೂ ಬೆಳೆಸಿಕೊಂಡು ಬಂದರು. ಈ ಅಭ್ಯುದಯದ ಕಾಲದಲ್ಲಿ ಅನೇಕ ಪ್ರಾಣಿಗಳ ವೃತ್ತಾಂತಗಳು ಹೊರಬಿದ್ದವು. ಹದಿನಾರನೆಯ ಶತಮಾನದ ಅಂತ್ಯದಲ್ಲಿ ರೂಯಿನಿಯಿಂದ ಕುದುರೆ ವೃತ್ತಾಂತವೂ 17ನೆಯ ಶತಮಾನದಲ್ಲಿ ಇಟಲಿಯ ಫ್ರಾನೆಸ್ಕೋ ರೆಡಿಯಿಂದ ಗೋಸುಂಬೆ ವೃತ್ತಾಂತವೂ ಇಂಗ್ಲೆಂಡಿನ ಟೈಸನ್ನನಿಂದ ಚಿಂಪ್ಯಾಂಜಿ ವೃತ್ತಾಂತವೂ ಮ್ಯಾಲ್ಪೀಗಿಯಿಂದ ರೇಷ್ಮೆಹುಳು, ಸ್ವಾಮರ್‍ಡಾಮನಿಂದ ಜೇನ್ನೊಣ ಮತ್ತು ಲ್ಯೂವೆನ್ ಹೂಕನಿಂದ ಚಿಗಟದ ವೃತ್ತಾಂತಗಳೂ ಪ್ರಕಟವಾದವು.

ವಿಲಿಯಮ್ ಹಾರ್ವೆಯ ಅನ್ವೇಷಣೆಯಿಂದಾಗಿ ಶರೀರಿವಿಜ್ಞಾನದ ತುಲನಾತ್ಮಕ ವಿವರಣೆಗಳು ಪ್ರಕಟವಾಗತೊಡಗಿದುವು. ಸ್ಟೀಫೆನ್ ಹೇಲ್ಸ್ ಬರೆದ ಸಸ್ಯಗಳಲ್ಲಿ ಜಲಾಭಿಸರಣೆ ಎಂಬುದು 19ನೆಯ ಶತಮಾನದ ಪ್ರಸಿದ್ಧ ಕೃತಿ. ಬೇರಿನ ಮೂಲಕ ಹೊಕ್ಕು ಎಲೆಯಿಂದ ವಿಸರ್ಜನೆಯಾಗುವ ನೀರನ್ನು ಖಚಿತವಾಗಿ ಅಳೆದು, ಮಣ್ಣಿನ ತೇವಕ್ಕೂ ಸಸ್ಯಗಳ ನೀರ್ಸಳೆತಕ್ಕು ಇರುವ ನಿಕಟ ಸಂಬಂಧವನ್ನು ಈತ ದೃಢಪಡಿಸಿದ. ಬೇರಿನ ಒತ್ತಡಕ್ಕೆ ಸಸ್ಯಗಳ ವಿಶಿಷ್ಟ ರೂಪ ರಚನೆಯೇ ಮೂಲವೆಂದು ಈತ ತೋರಿಸಿದ. ಎಲ್ಲಕ್ಕೂ ಮಿಗಿಲಾಗಿ ವಾಯುವಿನ ಕೆಲವಂಶ (ಈಗ ತಿಳಿದಿರುವಂತೆ, ಕಾರ್ಬನ್ ಡೈಆಕ್ಸೈಡ್) ಸಸ್ಯಗಳಲ್ಲಿ ಆಹಾರೋತ್ಪತ್ತಿಗೆ ಅತ್ಯವಶ್ಯವೆಂದು ನಿರೂಪಿಸಿದವರಲ್ಲಿ ಹೇಲ್ಸನೇ ಮೊದಲಿಗ. ವಾಯು ಎಲೆಗಳ ಮೂಲಕ ಮಾತ್ರವಲ್ಲದೆ ತೊಗಟೆಯ ಮಾರ್ಗವಾಗಿಯೂ ಗಿಡಗಳನ್ನು ಪ್ರವೇಶಿಸುವುದೆಂದು ಈತ ನಂಬಿದ್ದ. ಸಸ್ಯಗಳಲ್ಲಿದ್ದಂತೆ ಪ್ರಾಣಿಗಳಲ್ಲೂ, ಅಳೆಯಬಹುದಾದ ರಕ್ತದ ಒತ್ತಡ ನಾಳಗಳಲ್ಲಿರುವುದೆಂದೂ ವಿವಿಧ ಸನ್ನಿವೇಶಗಳಲ್ಲಿ ಹಾಗೂ ವಿವಿಧ ಅಭಿ ಮತ್ತು ಅಪಧಮನಿಗಳಲ್ಲಿ ಈ ಒತ್ತಡ ವ್ಯತ್ತಾಸವಾಗುವುದೆಂದೂ ಶ್ರುತಪಡಿಸಿದ. ಹೀಗೆ, ಜೀವಶಾಸ್ತ್ರದಲ್ಲಿ ಅಮೂಲ್ಯವಾದ ಖಚಿತ ವಿಧಾನವನ್ನು ಅಳವಡಿಸಿಕೊಂಡು, ಜೀವಿಗಳ ಶರೀರಕ್ರಿಯೆಯನ್ನು ಅಧ್ಯಯನ ಮಾಡುವಂಥ ಹೇಲ್ಸನ ಪ್ರಯೋಗಗಳು ತುಲನಾಭ್ಯಾಸಕ್ಕೆ ಕಳಶಪ್ರಾಯವಾಗಿವೆ.

18ನೆಯ ಶತಮಾನದಲ್ಲಿ ಡಿ ರೌಮರ್ (1683-1757) ಎಂಬಾತ ಕಠಿಣ ಚರ್ಮಗಳಲ್ಲಿನ ಪುನರುತ್ಪತ್ತಿ, ನಕ್ಷತ್ರಮೀನಿನ ಚಲನಾಕ್ರ, ಟಾರ್ಪೀಡೋವಿನ ವಿದ್ಯುತ್ಪರಿಕರ, ಕಡಲವಾಸಿಗಳ ಸಂದೀಪ್ತಿ, ಪಾಚಿಗಳ ಬೆಳೆವಣಿಗೆ, ಪಕ್ಷಿಗಳ ಪ್ರಚನಕ್ರಿಯೆ, ಜೇಡನ ಬಲೆ ಮುಂತಾದವನ್ನು ಪರಿಶೋಧಿಸಿದ್ದಾರೆ. ಕೀಟಗಳ ರೂಪ ಪರಿವರ್ತನೆ ಮತ್ತು ಬೆಳವಣಿಗೆಯ ಮೇಲೆ ಉಷ್ಣತೆಯ ಪ್ರಭಾವವನ್ನು ವಿವರಿಸುವ ಉತ್ತಮ ಕೃತಿಯನ್ನೂ ಬರೆದಿದ್ದಾನೆ. ಈತನ ಸಮಕಾಲಿನರಾದ ಲೈಯೊನೆಟ್ ಮತ್ತು ಟ್ರೆಂಬ್ಲಿ ಎಂಬಿಬ್ಬರು ಸೂಕ್ಷ್ಮತರ ಅಂಗಚ್ಛೇದಕ್ಕೆ ಪ್ರಸಿದ್ಧರಾದವರು. 500 ಕ್ಕೂ ಹೆಚ್ಚು ಸಸ್ಯ ಮತ್ತು ಪ್ರಾಣಿಗಳ ಅಂಗಚ್ಛೇದ ಮಾಡಿ ಜೀವಿಯ ವಿವಿಧ ಹಂತಗಳಲ್ಲಾಗುವ ರಚನಾ ಮಾರ್ಪಾಟುಗಳನ್ನು ವೈಜ್ಞಾನಿಕ ರೀತ್ಯ ಅಭ್ಯಸಿಸಲು ತೊಡಗಿದವನೆಂದರೆ ಜಾನ್ ಹಂಟರ್, ನೈಸರ್ಗಿಕ ವಸ್ತು ಸಂಗ್ರಹಾಲಯಗಳ ಅಸ್ತಿತ್ವಕ್ಕೆ ಈತನೇ ಕಾರಣಪುರುಷನೆಂದು ಹೇಳಲಾಗಿದೆ. ಇದುವರೆಗೂ ತುಲನಾಧ್ಯಯನ ವ್ಯಕ್ತಿಯನ್ನನುಸರಿಸಿ ಮುನ್ನಡೆಯುತ್ತಿತ್ತು. ಪ್ರಸಿದ್ಧ ಫ್ರೆಂಚ್ ವಿಜ್ಞಾನಿ ಜಾರ್ಜ್ ಕ್ಯೂವೀಯೇ (1769-1832) ತನ್ನ ವಿಶಿಷ್ಟವೂ ಸುಭದ್ರವು ಆದ ಸ್ಥಾನದ ಪ್ರಭಾವದಿಂದಾಗಿ ಪ್ರಖ್ಯಾತ ಪರಿಣತರ ತಂಡವನ್ನೇ ನಿರ್ಮಿಸಿ, ಈ ದಿಸೆಯಲ್ಲಿ ಉತ್ತಮೋತ್ತಮ ಸಂಶೋಧನೆಗಳು ನಡೆಯಲು ನೆರವಾದ, ವೈವಿಧ್ಯಪೂರ್ಣ ವಸ್ತುಗಳನ್ನು ಕ್ರೋಢೀಕರಿಸಿ ಈತ ಸ್ಥಾಪಿಸಿದ ಲುಪ್ತ ಜೀವಿಶಾಸ್ತ್ರವೇ ಈಗೀನ ಪ್ರಭೇದಗಳು ಶಾಶ್ವತವಲ್ಲವೆಂಬ ತತ್ತ್ವಕ್ಕೆ ಬುನಾದಿಯಾಗಿದೆ. ಕ್ಯೂವೀಯೇನ ರನೆ ಅನಿಮಾಲಿ ಎಂಬ ಪುಸ್ತಕ ಪ್ರಾಣಿಗಳ ತುಲನಾಭ್ಯಾಸಕ್ಕೆ ಈಗಲೂ ಆಕರಗ್ರಂಥವಾಗಿದೆ. ಲುಪ್ತಜೀವಿಶಾಸ್ತ್ರದ ಸ್ಥಾಪನೆ, ಮೃದ್ವಂಗಿಗಳ ದೇಹರಚನಾಧ್ಯಯನ ಮತ್ತು ಮತ್ಸ್ಯವರ್ಗವನ್ನು ಕುರಿತ ವೈಜ್ಞಾನಿಕ ಶೋಧನೆಗಳು-ಇವು ಕ್ಯೂವೀಯೇನ ಕೊಡುಗೆಗಳು. ಬಹುವಾಗಿ ಈತನ ಮಾರ್ಗವನ್ನೇ ಅನುಸರಿಸಿ ಇಂಗ್ಲೆಂಡಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ರಿಚರ್ಡ್ ಓವೆನ್ನನನ್ನು (1804-92) ಮರೆಯುವಂತಿಲ್ಲ.
ಕ್ಯೂವೀಯೇ ಮತ್ತು ಆತನ ಅನುಯಾಯಿಗಳು ದೇಹ ರಚನೆಯ ಸಾಮ್ಯಾ ಸಾಮ್ಯತೆಗಳ ಸಂಶೋಧನೆಯಲ್ಲಿ ತಲ್ಲೀನರಾಗಿದ್ದಾಗ, ಜರ್ಮನಿಯ ಯೋಹಾನೆಸ್ ಮ್ಯುಲರ್ ಎಂಬಾತ (1801-58) ಜೀವಿಗಳ ಶರೀರಕ್ರಿಯೆಯ ತುಲನಾಧ್ಯಯನ ಕ್ರಮಕ್ಕೆ ಹೊಸ ತಿರುವನ್ನಿತ್ತು. ಅದನ್ನು ಸುಭದ್ರವಾಗಿಸಿದ. ತನ್ನ ಅಂತ್ಯ ಕಾಲದಲ್ಲಿ ಮ್ಯುಲರ್ ಪ್ರಾಣಿಗಳ ಸಂಶೋಧನೆಗೆ ಆದ್ಯತೆಯನ್ನಿತ್ತು. ಗ್ರಂಥಿ ಮತ್ತು ಮೃದ್ವಸ್ಥಿಗಳ ರಚನೆಯನ್ನು ಕ್ರಮವಾಗಿ ಅಭ್ಯಸಿಸಿ ತನ್ನ ಶಿಷ್ಯನಾದ ಶ್ವಾನನಿಗೆ ಮಾರ್ಗದರ್ಶಕನದ. ಈತನು ಆಜನ್ಮ ಚೈತನ್ಯವಾದಿ. ಮ್ಯುಲರನ ನರಚೈತನ್ಯ ನಿಯಮ ಇಂದಿಗೂ ಚೈತನ್ಯವಾದಿಗಳ ಆದರ್ಶ ತತ್ತ್ವವಾಗಿದೆ. ಗಿಡಮರಗಳನ್ನು ಕುರಿತ ಲುಪ್ತಜೀವಿಶಾಸ್ತ್ರ 1831ರಲ್ಲೆ ಬೆಳಕು ಕಂಡರೂ ಇದರ ಶಾಸ್ತ್ರಿಯ ಅಧ್ಯಯನ ಆರಂಭವಾದದ್ದು 1858ರಿಂದೀಚೆಗೆ ಮಾತ್ರ. ಇದರ ಏಳಿಗೆಗೆ ಕಾರಣನಾದ ವಿಲಿಯಮ್ಸನ್ (1816-95) ಎಂಬುವ ಪುಷ್ಪರಹಿತ ಸಸ್ಯಗಳಾದ ಆಧುನಿಕ ಜರೀಗಿಡ, ಹಾಗೂ ಕ್ಲಬ್ ಮಾಸ್ ಗಿಡಗಳನ್ನು ಹೋಲುವ ದೈತ್ಯಾಕಾರದ ಸಸ್ಯಾವಶೇಷಗಳನ್ನು ಪತ್ತೆ ಹಚ್ಚಿದ್ದ. ಇದರಿಂದಾಗಿ ಭೂಗರ್ಭದ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಅವುಗಳ ವಿವಿಧ ಪದರಗಳಲ್ಲಿ ಹುದುಗಿರುವ ಫಾಸಿಲುಗಳು ಭೂಮಿಯ ಗತಕಾಲದ ವೈಭವವನ್ನೂ ಹಲವಾರು ಮಿಲಿಯನ್ ವರ್ಷಗಳ ಹಿಂದೆಯೇ ಅಸಂಖ್ಯಾತ ಜೀವಿಗಳು ಇದ್ದುವೆಂಬುದನ್ನೂ ಸೂಚಿಸುವಂತಾಯಿತು.

(e) ಆಧುನಿಕ ಜೀವಶಾಸ್ತ್ರ : ಹೀಗೆ, ಲುಪ್ತಜೀವಿಶಾಸ್ತ್ರ, ತುಲನಾತ್ಮಕ ಅಂಗರಚನಾಶಾಸ್ತ್ರ, ಶರೀರ ವಿಜ್ಞಾನ, ಭ್ರೂಣಶಾಸ್ತ್ರ ಇತ್ಯಾದಿಗಳ ಸ್ಥೂಲ ಅಧ್ಯಯನದಿಂದಾಗಿ ಆಧುನಿಕ ವಿಕಾಸವಾದಕ್ಕೆ ಸಾಕಷ್ಟು ಸಾಕ್ಷಿಪುರಾವೆಗಳು ದೊರೆತು. ಫಾನ್ ಬೇಯರ್‍ನು ಯಾವಾಗಲೂ ಅಂಗರಚನೆಗಳ ಹೋಲಿಕೆಗಳಿಂದ ವ್ಯತ್ಯಾಸಗಳ ಕಡೆಗೆ ಬೆಳೆವಣಿಗೆ ಸಾಗುತ್ತಿರುತ್ತದೆ ಎಂಬ ತತ್ತ್ವವನ್ನು ಪ್ರತಿಪಾದಿಸಿದ್ದಲ್ಲದೆ. ಪ್ರಾಯೋಗಿಕವಾಗಿಯೂ ತೋರಿಸಿದ. ಉದಾಹರಣೆಗೆ ಕಪ್ಪೆಯ ಬೆಳೆವಣಿಗೆಯ ವಿವಿಧ ಹಂತಗಳಲ್ಲಿ ಕಾಣಬರುವ ಹಲವಾರು ಸ್ಥಿತ್ಯಂತರಗಳನ್ನು ಪರಿಶೀಲಿಸಿದಾಗ, ಅದು (ಅಥವಾ ಕಪ್ಪೆ ಸೇರಿದ ಆಂಫಿಬಿಯ ವರ್ಗದ ಯಾವುದೇ ಪ್ರಾಣಿಯಾದರೂ ಸರಿಯೆ) ಬೆಳೆವಣಿಗೆಯ ಕಾಲದಲ್ಲಿ ಸಾಮಾನ್ಯವಾಗಿ ತನ್ನ ಹಿಂದಿನ ಜೀವಿಗಳು ವಿಕಾಸದ ಹಾದಿಯಲ್ಲಿ ಅನುಭವಿಸಿದ ಬದಲಾವಣೆಗೆ ಸಂಪೂರ್ಣ ಇತಿಹಾಸವನ್ನು ನಿರೂಪಿಸುವುದು ಮನದಟ್ಟಾಗುವುದು ; ಅಂದರೆ ವಿಕಾಸದ ಹಾದಿಯಲ್ಲಿ ಹಂತಹಂತವಾಗಿ ಉಂಟಾದ ರೂಪಾಂತರಗಳನ್ನು ಅದರ ಬೆಳೆವಣಿಗೆ ಪ್ರತಿಬಿಂಬಿಸುವುದು ವ್ಯಕ್ತವಾಗುತ್ತದೆ. ಇದನ್ನೇ ಪುನರಾವರ್ತನವಾದೆಂದು ಕರೆಯುತ್ತಾರೆ. ಮನುಷ್ಯನೂ ಸೇರಿದಂತೆ ಅನೇಕ ಜೀವಿಗಳ ಮೇಲೆ ನಡೆಸಿದ ಇನ್ನೂ ಎಷ್ಟೋ ಬಗೆಯ ಪರಿಶೋಧನೆಗಳಿಂದ ಈ ನಿಯಮಕ್ಕೆ ಸಮರ್ಥನೆ ಹಾಗೂ ಪುಷ್ಟಿ ದೊರೆತಿವೆ.

18ನೆಯ ಶತಮಾನದ ಅಂತ್ಯದಲ್ಲಿ ಅನುವಂಶಿಕ ಸೂತ್ರಗಳ ಹಿನ್ನೆಲೆಯಿಲ್ಲದೆಯೇ ಲಮಾರ್ಕ್ (1744-1829) ವಿಕಾಸ ತತ್ತ್ವಗಳ ಬಗ್ಗೆ ಚಿಂತಿಸತೊಡಗಿದ. ಲಮಾರ್ಕನ ತತ್ತ್ವ ಹೇಳುವುದಿಷ್ಟೆ ; ಪರಿಸರದಲ್ಲಿ ಉಂಟಾಗುವ ಬದಲಾವಣೆಗಳು ಜೀವಿಗಳ ದೇಹರಚನೆಯಲ್ಲಿಯೂ ಸೂಕ್ತ ಬದಲಾವಣೆಗಳುಂಟಾಗುವಂತೆ ಮಾಡುತ್ತವೆ. ಅವುಗಳಲ್ಲಿ ಕೆಲವು ಹೊಸ ಅಂಗಗಳ ರೂಪದಲ್ಲಾಗಲಿ ಇಲ್ಲವೆ ಕೆಲವು ಅಂಗಗಳ ಅಥವಾ ಭಾಗಗಳ ವಿಪರೀತ ಬಳಕೆಯಿಂದಾಗಲಿ ವಿವಿಧ ಪರಿಣಾಮಗಳನ್ನು ಕಾಣಬಹುದು. ಅಂದರೆ ಪರಿಸ್ಥಿತಿಗೆ ಪ್ರೇರಕಶಕ್ತಿಯಿದೆ ಎಂದು ಲಮಾರ್ಕ್ ನಂಬಿದ್ದ. ಆದ್ದರಿಂದಲೇ ಅತಿಯಾಗಿ ಬಳಕೆಯಾಗುವ ಅಂಗಗಳು ಚೆನ್ನಾಗಿ ಬೆಳೆಯುವುವೆಂದು ಉಪಯೋಗಿಸದ ಅವಯವಗಳು ಕ್ಷೀಣಿಸುವುದೆಂದೂ ಈತ ತೀಮಾರ್ನಿನಿಸಿದ. ಈ ಬಗೆಯ ಬದಲಾವಣೆಗಳು ಜೀವಿಯಲ್ಲಿ ಮೇಲಿಂದಮೇಲೆ ಸಂಭವಿಸಿದರೆ ಅದರ ಮೂಲಜಾತಿಯಿಂದ ಭಿನ್ನವಾಗಿರುವ ಬೇರೆ ಜಾತಿಯ ಜೀವಿ ಹುಟ್ಟುವುದೆಂದು ಪ್ರತಿಪಾದಿಸಿದ. ಈ ರೀತಿಯ ಅರ್ಜಿತ ಗುಣಧರ್ಮಗಳು ವಂಶಗತವಾಗುವುದರಿಂದಲೇ ವಿಕಾಸವಾಗುವುದೆಂಬುದು ಲಮಾರ್ಕನ ಸಿದ್ಧಾಂತದ ತಿರುಳು. ಆದರೆ ಈ ತತ್ತ್ವಕ್ಕೆ ಪ್ರಯೋಗಿಕ ಸತ್ತ್ವವಿದ್ದಿಲ್ಲದ ಕಾರಣ ಇದು ವಿಜ್ಞಾನಿಗಳ ಮೆಚ್ಚುಗೆಯನ್ನು ಗಳಿಸಲಿಲ್ಲ.
ಪ್ರಖ್ಯಾತ ಅರ್ಥಶಾಸ್ತ್ರಜ್ಞನಾದ ಮ್ಯಾಲ್ತಸ್‍ನ (1766-1834) ಪ್ರಬಂಧದಿಂದಲೂ ತನ್ನ ಗುರುವಾದ ಲೈಯಲ್ಲನ ಭೂಗರ್ಭಶಾಸ್ತ್ರದ ವ್ಯಾಖ್ಯಾನದಿಂದಲೂ ಪ್ರಭಾವಿತನಾದ ಪ್ರಸಿದ್ಧ ನಿಸರ್ಗವಿಜ್ಞಾನಿ ಚಾಲ್ರ್ಸ್ ಡಾವಿನ್ ತನ್ನ ಬೀಗಲ್ ಪ್ರವಾಸ ಕಾಲದಲ್ಲಿ ಸಂಗ್ರಹಿಸಿದ ಮೃಗಪಕ್ಷಿಗಳನ್ನು ಕ್ರಿಮಿಕೀಟಗಳನ್ನು ಗಿಡಮರಗಳನ್ನು ಸಾವಕಾಶವಾಗಿ ಅಭ್ಯಸಿಸಿ, ಆಲೋಚಿಸಿ, ಜೀವಜಾತಿಗಳಲ್ಲಿ ಪರಿವರ್ತನೆ ಯಾಗುವುದೆಂಬ ತೀರ್ಮಾನಕ್ಕೆ ಬಂದ. ಲುಪ್ತಜೀವಿಶಾಸ್ತ್ರ, ಭೂಗರ್ಭಶಾಸ್ತ್ರ ಮುಂತಾದ ಹಲವು ಶಾಸ್ತ್ರಗಳಲ್ಲಿ ಚದರಿಬಿದ್ದಿದ್ದ ವಿಷಯಗಳನ್ನೆಲ್ಲ ಕ್ರೋಡೀಕರಿಸಿ, ಅವುಗಳಲ್ಲಿ ಅಡಗಿರುವ ತಿರುಳನ್ನು ಸಿದ್ದಾಂತ ರೂಪಕ್ಕೆ ತಂದು ತನ್ನ ಕ್ರಾಂತಿಕಾರಕ ವಿಕಾಸವಾದವನ್ನು ಡಾರ್ವಿನ್ ಮಂಡಿಸಿದ. ಆದ್ದರಿಂದಲೇ ಈ ಸಿದ್ಧಾಂತಕ್ಕೆ ಡಾರ್ವಿನನ ತತ್ತ್ವವೆಂದು ಹೆಸರು. ಬೇರೆ ಬೇರೆ ಶಾಸ್ತ್ರಗಳಿಂದ ಬಂದ ಸೂಚನೆಯನ್ನು ಈತ ಬಡಪೆಟ್ಟಿಗೆ ಒಪ್ಪಲಿಲ್ಲ. ಪ್ರತಿಯೊಂದರ ವಿಚಾರವಾಗಿಯೂ ಸತತವಾಗಿ ಚಿಂತಿಸಿ, ಸಾಕಷ್ಟು ಸಾಕ್ಷ್ಯಗಳು ದೊರೆತ ಅನಂತರವೇ ತನ್ನ ವಾದವನ್ನು ಬಹಿರಂಗಪಡಿಸಿದ. ವಿಷಯವನ್ನು ಸಾವಧಾನವಾಗಿ ಸಂಗ್ರಹಿಸಿ, ಸಂಗ್ರಹಿಸಿದ ವಿಷಯದಲ್ಲಿ ಜಳ್ಳಾದುದನ್ನು ಆಯ್ದು, ಅಳೆದು, ಸುರಿದು, ಅನೇಕ ವರ್ಷಕಾಲ ಮನನ ಮಾಡಿ ಕೊನೆಗೆ ಸಿದ್ಧಾಂತಕ್ಕೆ ಬರುತ್ತಿದ್ದುದು ಡಾರ್ವಿನ್ನನ ಅಮೋಘ ಗುಣ. ದೇಶಪರ್ಯಟನೆಗಳ ವಾಸ್ತವಿಕ ಅನುಭವದ ಜೊತೆಗೆ ತನ್ನ ಇಪ್ಪತ್ತು ವರ್ಷಗಳ ತಪಸ್ಸಿನ ಫಲವನ್ನು 1859ರಲ್ಲಿ ಆರಿಜಿನ್ ಆಫ್ ಸ್ಟಿಷೀಸ್ ಬೈ ನ್ಯಾಚುರಲ್ ಸೆಲೆಕ್ಷನ್ (ಪ್ರಕೃತಿಯ ಆಯ್ಕೆಯಿಂದ ಪ್ರಭೇದಗಳ ಉಗಮ) ಎಂಬ ಕೃತಿಯಲ್ಲಿ ಪ್ರಕಟಿಸಿದ್ದಾರೆ. ಅದೇ ವೇಳೆಗೆ ವ್ಯಾಲೆಸ್ ಎಂಬುವವನೂ ಇದೇ ವಾದವನ್ನು ಪ್ರತಿಪಾದಿಸಿದ್ದ.

ಪರಿಸರಕ್ಕೂ ಪ್ರತಿಯೊಂದು ಜೀವಿಗೂ ಇರುವ ಪರಸ್ಪರ ಸಂಬಂಧದ ಪ್ರಮುಖಾಂಶಗಳನ್ನು ಡಾರ್ವಿನ್ನನ ವಾದಸರಣಿಯಲ್ಲಿ ಈ ರೀತಿ ಕಾಣಬಹುದು :
ಪ್ರತಿ ಕ್ಷಣದಲ್ಲೂ ಬದಲಾವಣೆಯಾಗುವುದು ಜೀವಿಗಳ ಲಕ್ಷಣ.

ಅವು ಬದಲಾಯಿಸುವುದು ಅವ್ಯಕ್ತ ರೂಪದಿಂದ ವ್ಯಕ್ತರೂಪದ ಕಡೆಗೆ, ಸಾಮಾನ್ಯಾವಸ್ಥೆಯಿಂದ ವಿಶಿಷ್ಟಾವಸ್ಥೆಯ ಕಡೆಗೆ.
ಜೀವಿಗಳು ಹುಟ್ಟಿ ಬೆಳೆಯುವ ಪರಿಸರ ಈ ಬದಲಾವಣೆಗಳಿಗೆ ಕಾರಣ; ತಾವು ಇರುವ ಆವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವುದು ಜೀವಿಗಳ ಲಕ್ಷಣ ; ಪ್ರತಿಕೂಲ ಪರಿಸರದಿಂದಾಗಿ ಬಾಳಿಗೆ ಭಂಗಬಂದಂತೆಲ್ಲ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರತಿಯೊಂದು ಜೀವಿಯೂ ಬಗೆಬಗೆಯ ವೈಶಿಷ್ಟ್ಯವನ್ನು ತೋರುವುದು.

ಆದರೆ ಎಲ್ಲ ಜೀವಿಗಳ ಸಾಮಥ್ರ್ಯ ಸಮಾನವಾಗಿರುವುದಿಲ್ಲ ; ದುರ್ಬಲ ಜೀವಿಗಳು ಬದುಕಿನ ಹೋರಾಟದಲ್ಲಿ ಕ್ರಮೇಣ ಅಳಿದುಹೋಗುವುವು.

ಯಾವ ಜೀವಿ ಈ ಹೋರಾಟದಲ್ಲಿ, ಜೀವನ ಕ್ರಮ ಮತ್ತು ರಚನಾಕೌಶಲಗಳಿಂದ ಪರಿಸರಕ್ಕೆ ಹೊಂದಿಕೊಂಡು ಗೆಲ್ಲುವುದೋ ಅದೇ ಉಳಿಯಬಲ್ಲುದು. ಇದರಿಂದಲೇ ಜಯಿಸಬಲ್ಲ ಜೀವಿಯೇ ಜೀವಿಸಲು ಯೋಗ್ಯವಾದ ಜೀವಿ ಎಂಬುದಾಗಿ ಡಾರ್ವಿನ್ ಹೇಳಿದ್ದಾನೆ.

ಸೂಕ್ಷ್ಮವಾದ ವೈಯಕ್ತಿಕ ವ್ಯತ್ಯಾಸಗಳೇ ಜೀವಿಯ ಬದುಕಿನ ಹೋರಾಟದ ಸೋಲು-ಗೆಲುವುಗಳ ನಿಯಂತ್ರಕಗಳು; ಇಂಥ ಜೀವದಾಯಕ, ವೈಯಕ್ತಿಕ ವ್ಯತ್ಯಾಸಗಳುಳ್ಳ ಜೀವಿಗಳನ್ನು ತೂರಿ, ಜಳ್ಳಾದವನ್ನು ತುಳಿದು, ಕಾಳಾದವನ್ನು ಆರಿಸಿ, ಪೋಷಿಸಿ, ಆರೈಕೆ ಮಾಡುವ ನಿಸರ್ಗದ ಕೈವಾಡಕ್ಕೆ ಪ್ರಕೃತಿಯ ಆಯ್ಕೆ ಎಂಬ ಹೆಸರು ಕೊಟ್ಟು.
ಇಂಥ ಗುಣವಿಶೇಷಗಳು ಕಾಲಕ್ರಮೇಣ ವಂಶಗತವಾಗುವುದರಿಂದ ಹೊಸ ಹೊಸ ಜೀವಿಗಳು ಉದಯಿಸುವುವು.

ಡಾರ್ವಿನ್ನನ ವಾದವನ್ನು ಎತ್ತಿ ಹಿಡಿದವರಲ್ಲಿ ತಾಮಸ್ ಹೆನ್ರಿ ಹಕ್ ಸ್ಲೀ (1825-95), ಆರ್‍ನ್‍ಸ್ಟ್ ಹೆಕೆಲ್ (1834-1919) ಮತ್ತು ತಿಯೋಡೋಸಿಯಸ್ ಡಾಬ್ಜಾನ್‍ಸ್ಕಿ ಅಗ್ರಗಣ್ಯರು. ಈಗಲೂ ಪ್ರಪಂಚದ ನಾನಾ ಮೂಲೆಗಳಲ್ಲಿ ಅವಿರತವಾಗಿ ನಡೆಯುತ್ತಿರುವ ಸಂಶೋಧನೆಗಳು ಡಾರ್ವಿನ್ನನ ತತ್ತ್ವಕ್ಕೆ ಪುರಾವೆಗಳನ್ನು ಒದಗಿಸುತ್ತಿವೆ. ವಿಕಾಸವೆಂಬ ಪದವನ್ನು, ಜಯಿಸಬಲ್ಲ ಜೀವಿಯೇ ಜೀವಿಸಲು ಯೋಗ್ಯವೆಂಬ ಪದಪುಂಜಗಳನ್ನು ಹರ್ಬರ್ಟ್ ಸ್ಟೆನ್ಸರ್ ಮತ್ತು ಲೈಯಲ್ ಬಳಸಿದ್ದರೆಂದು ಕೆಲವರ ಅಭಿಮತ. ಆದರೆ ಈ ಪದಗಳಿಗೆ ವೈಜ್ಞಾನಿಕ ಮೆರುಗನ್ನಿತ್ತು ಅವುಗಳ ಅರ್ಥವಿವರಣೆಯನ್ನು ಹೆಚ್ಚಿಸಿದ ಕೀರ್ತಿ ಡಾರ್ವಿನ್ನನಿಗೆ ಸಲ್ಲಬೇಕೆಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕ ವೈಷಮ್ಯದಿಂದ ಪ್ರಾಂತೀಯ ದ್ವೇಷದಿಂದ, ಮತೀಯ ಮತ್ಸರದಿಂದ ಡಾರ್ವಿನ್ನನ ವಿಕಸ ತತ್ತ್ವವನ್ನು ಅಲ್ಲಗೆಳೆಯುವವರೂ ಉಂಟು. ಆದರೆ ಆಧುನಿಕ ತಳಿವಿಜ್ಞಾನದ ಅನುವಂಶಿಕ ಸೂತ್ರಗಳ ಅರಿವಿನಿಂದಾಗಿ ಡಾರ್ವಿನ್ನನ ತತ್ತ್ವ ಕೀರ್ತಿಶಿಖರವನ್ನೇರಿದ. 1866ರಲ್ಲಿ ಮಂಡಿಸಿದ್ದ ಮೆಂಡಲನ ಆನುವಂಶಿಕ ನಿಯಮಗಳ ಮರುಸಂಶೋಧನೆ ಆಧುನಿಕ ಜೀವವಿಜ್ಞಾನದ ಅಡಿಗಲ್ಲಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಸಾಗುವ ಜೀವಿಗಳ ಗುಣಲಕ್ಷಣಗಳ ಅಧ್ಯಯನ 20ನೆಯ ಶತಮಾನದ ಆದಿಯಿಂದಲೂ ಅಗ್ರಸ್ಥಾನವನ್ನು ಆಕ್ರಮಿಸಿದೆ. ಅಂತೆಯೇ ಪ್ರಭೇದಗಳ ವಿವರ, ವಿಷಾಣುಗಳ ವಿಷಯ. ಪರಿಸರ ವಿಜ್ಞಾನ ಹಾಗೂ ಜೀವಿಯ ವಿವಿಧಾಂಗಗಳ ಅಂತರಸಂಬಂಧಗಳ ಸೂಕ್ಷ್ಮಾಭ್ಯಾಸವೇ ಆಧುನಿಕ ಜೀವವಿಜ್ಞಾನದ ಪರಮೋದ್ಧೇಶವಾಗಿದೆ.

2 ವಿಕಾಸವಾದ : ಕಾಲ ಗತಿಸಿದಂತೆಲ್ಲ, ಸಜೀವಿಗಳು ಮತ್ತು ನಿರ್ಜೀವಿಗಳು ತಮ್ಮ ಕ್ರಿಯಾಚಟುವಟಿಕೆಯಲ್ಲೂ ರೂಪದಲ್ಲೂ ಬದಲಾಗುವುದು ಪ್ರಕೃತಿದತ್ತ ನಿಯಮ. ಆದರೆ ಅವು ವಿಕಸಿಸುವ ಬಗೆ, ಅನುಸರಿಸುವ ಮಾರ್ಗ, ಉಗಮದ ಹಿನ್ನೆಲೆ ವಿಜ್ಞಾನಿಗಳಿಗೊಂದು ಕಗ್ಗಂಟಾಗಿದೆ. ಉತ್ಕ್ರಾಂತಿಯ ಆದಿಯಲ್ಲಿ ನಡೆದಿರಬಹುದಾದ ರಾಸಾಯನಿಕ ವಿಕಾಸ ಬಹು ದೀರ್ಘವಾದುದು. ಎಲ್ಲ ಜೀವಿಗಳೂ ನಿರ್ಜೀವ ವಸ್ತುಗಳಿಂದಲೇ ಉಗಮವಾದುವು. ಹೀಗೆ ರೂಪುಗೊಂಡ ಸ್ವಯಂ ಉತ್ಪಾದಕ ಘಟಕಗಳು ಪರಿಸರದ ವೈಪರೀತ್ಯಗಳಿಂದ ಪಾರಾಗಲು ರಕ್ಷಾಕವಚದಿಂದ ಆವೃತವಾದ ಬಳಿಕವೇ ಜೀವೋದ್ಭವವಾಯಿತೆನ್ನಬಹುದು. ಈ ಆದಿಜೀವಿ ಹತ್ತಾರು ಕಾರಣಗಳಿಂದಾಗಿ ಕ್ರಮಬದ್ಧವಾಗಿ, ಹಂತಹಂತವಾಗಿ, ಯುಗ ಯುಗಾಂತರಗಳ ಅವಧಿಯಲ್ಲಿ ಈಗಿನ ವೈವಿಧ್ಯಮಯ ಬಹುರೂಪಿಗಳಾಗಿ ಮಾರ್ಪಾಡಾದುದರ ಫಲವೇ ಇಂದಿನ ಪ್ರಾಣಿ, ಸಸ್ಯಸಂಪತ್ತಿಗೆ ಕಾರಣ. ಪ್ರಕೃತಿಯಲ್ಲಿ ನಡೆಯುತ್ತಿರುವ ಈ ಅದ್ಭುತವನ್ನೇ ವಿಕಾಸವೆನ್ನುವರು. ಹಿಂದೆ ನಡೆದಂತೆ ವಿಕಾಸ ಈಗಲೂ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ಇದೊಂದು ನಿಸರ್ಗನಿಯಮ. ಈ ವೈಜ್ಞಾನಿಕ ಸತ್ಯ ಅನಾದಿಕಾಲದಿಂದಲೂ ಬೇರೂರಿದ್ದ ದೈವಸೃಷ್ಟಿಯ ಮಿಥ್ಯಾಭಾವನೆಯನ್ನು ಕಿತ್ತೊಗೆಯಿತು. ಸಾಕ್ಷಿ ಪುರಾವೆಗಳಿಂದ ವಿಕಾಸತತ್ತ್ವವನ್ನು ಮೆರೆಯಿಸಿದ ಕೀರ್ತಿ ಚಾಲ್ರ್ಸ್ ಡಾರ್ವಿನ್ನನಿಗೆ ಸಲ್ಲುತ್ತದೆ. 1859ನೆಯ ನವೆಂಬರ್ 24ರಲ್ಲಿ ಪ್ರಕಟಿಸಿದ ಪ್ರಭೇದಗಳ ಉಗಮವನ್ನು ಕುರಿತ ವಿಚಾರಶೀಲ ಉದ್ಗ್ರಂಥದಲ್ಲಿ ವಿಕಾಸಕ್ಕೆ ಕಾರಣವಾದ ಐದು ಪ್ರಮುಖ ಪ್ರಭಾವಗಳನ್ನು ಈತ ಉಲ್ಲೇಖಿಸಿದ್ದಾನೆ.
ಸನ್ನಿವೇಶಕ್ಕೆ ಅನುಗುಣವಾಗಿ ಕೆಲವು ಜೀವಿಗಳು ಹೊಂದಿಕೊಂಡು ಪರಿಸರದೊಡನೆ ಸಮತೋಲನವನ್ನು ರೂಪಿಸುತ್ತವೆ. ಇವನ್ನೇ ಆದರ್ಶಜೀವಿಗಳೆಂದು ಕರೆಯುತ್ತಾರೆ. ಆದರೆ ಈ ಅಭಿಪ್ರಾಯ ಅಷ್ಟೊಂದು ಸೂಕ್ತವಲ್ಲ. ಏಕೆಂದರೆ, ನಿಸರ್ಗದ ನೆರಳಿನಲ್ಲಿ ನ್ಯೂನಜೀವಿಗಳ ವರ್ಜನೆಗಾಗಿ ಗೃಹಸ್ತಂಭನ ನಿರಂತರ ಶ್ರಮವಹಿಸುತ್ತದೆ. ಆದ್ದರಿಂದ ಕಳೆದುಳಿದ ಜೀವಿಗಳು ಆದರ್ಶಜೀವಿಗಳಾಗುವುವಲ್ಲದೆ ಬದಲಾವಣೆಗಳೂ ಯೋಗ್ಯವಾಗಿರುತ್ತವೆ. ಅಂದರೆ ಎಲ್ಲ ಜೀವಿಗಳೂ ಪರಿಸರಕ್ಕೆ ಅನುಗುಣವಾಗಿ ಬದಲಾಗಬಲ್ಲವು. ಈ ಬಗೆಯ ಗೃಹಸ್ಥಂಭನ ಹಾಗೂ ವಿಕಸನಗಳೇ ಜೀವವಿಜ್ಞಾನದ ವಿವಿಧ ಸಿದ್ಧಾಂತಗಳ ತಿರುಳು.

3. ಜೀವಸ್ವರೂಪ : (ಚಿ) ಜೀವಿಯ ಪ್ರಕೃತಿ : ಒಂದು ನಿರ್ದಿಷ್ಟ ಕವಚದಿಂದಾವೃತವಾದ ಧಾತು, ಪರಿಸರದೊಡನೆ ನಿಕಟ ಸಂಪರ್ಕವಿಟ್ಟು ಕೊಂಡಿದ್ದರೂ ಅಲ್ಪಕಾಲದಲ್ಲಿ ಅಗಾಧ ಮಾರ್ಪಾಡಿಗೆ ಒಳಗಾಗದಂಥ ಜೀವಿಯಿಂದಲೇ ಜೀವೋತ್ಪತ್ತಿಯಾಗುವುದು ಪ್ರಕೃತಿ ನಿಯಮ. ಅಂದರೆ ಸಂವರ್ಧನ ಹಾಗೂ ಸಂತಾನಕ್ರಿಯೆಗಳು ಜೀವಿಗಳಿಗಿರುವ ಅದ್ವಿತೀಯ ಗುಣ. ಜ್ವಾಲೆ, ಬುಗ್ಗೆ, ಸುಳಿ, ಜಲಪಾತಗಳೇ ಮುಂತಾದ ನಿರ್ಜೀವಿಗಳಲ್ಲೂ ಜೀವಿಗಳ ಸಂವರ್ಧನ ಕ್ರಿಯೆಯನ್ನೇ ಹೋಲುವ ವಿಶೇಷ ಗುಣವನ್ನು ಕಾಣುತ್ತೇವೆ. ಆದರೆ ಇವುಗಳಲ್ಲಿ ಸಂತಾನಶಕ್ತಿಯಿಲ್ಲ. ಅಂತೆಯೇ ಈ ಗಮನಾರ್ಹ ಗುಣವನ್ನು ಅವಲೋಕಿಸುವಾಗ ವಿವಿಧ ಜೀವಿಗಳ ರೂಪ, ರಚನೆ ಹಾಗೂ ನಡೆವಳಿಕೆಗಳ ವೈವಿಧ್ಯವನ್ನು ಪರಿಶೀಲಿಸುವುದು ಉತ್ತಮ. ಏಕೆಂದರೆ ಉದಾಹರಣೆಗೆ, ಬೆಕ್ಕನ್ನೇ ಹೋಲುವ ಪೂರ್ವಜಗಳಿಂದ ಬೆಕ್ಕೂ ಆಲದ ಮರವನ್ನೇ ಹೋಲುವ ಗಿಡದಿಂದ ಆಲದ ಮರವು ಜನ್ಮತಾಳುತ್ತವೆಯೋ ವಿನಾ ಬೆಕ್ಕಿನಿಂದ ಆಲದ ಮರವಾಗಲೀ ಅಥವಾ ಗಿಡದಿಂದ ಪ್ರಾಣಿಯಾಗಲೀ ಜನಿಸವು.

ಜೀವಿಗಳನ್ನು ಗುರುತಿಸುವಾಗ ಅಲ್ಪಾವಧಿಯಲ್ಲಾಗುವ ಬೆಳೆವಣಿಗೆಯನ್ನು ಪರಿಗಣೀಸುವುದು ಸೂಕ್ತ ; ಏಕೆಂದರೆ ಈ ಅವಧಿಯಲ್ಲಿ ಬೆಳೆವಣಿಗೆ ಹೆಚ್ಚಬಹುದು ಅಥವಾ ಕುಂಠಿತವಾಗಬಹುದು. ಆದರೆ ರಾಸಾಯನಿಕ ಕ್ರಿಯೆಯಲ್ಲಿ ಗರಿಷ್ಠ ಬದಲಾವಣೆಯಾದರೆ ಜೀವಿಗಳು ಕ್ರಮೇಣ ಕೃಶವಾಗುವುವಲ್ಲದೆ ಸಾವನ್ನಪ್ಪುತ್ತವೆ. ಸ್ವಯಂಪ್ರೇರಿತ ಚಲನೆಯುಳ್ಳ ಜೀವಿಗಳನ್ನು ಪ್ರಾಣಿಗಳೆಂದೂ ಈ ರೀತಿಯ ಚಲನೆಯಿಲ್ಲದೆ ಜೀವಿಗಳನ್ನು ಸಸ್ಯಗಳೆಂದೂ ವರ್ಗೀಕರಿಸುವುದು ಸರ್ವೇಸಾಮಾನ್ಯ. ಆದರೆ ಈ ಬಗೆಯ ನಿರೂಪÀಣೆ ಆಷ್ಟು ಸೂಕ್ತವಲ್ಲ. ಏಕೆಂದರೆ ಚಲನಶಕ್ತಿಯುಳ್ಳ ಅನೇಕ ಸಸ್ಯಗಳೂ ಸ್ಥಾವರ ಪ್ರಾಣಿಗಳೂ ಇಲ್ಲದಿಲ್ಲ. ಆದ್ದರಿಂದ ಸಂತಾನ ಹಾಗೂ ಬೆಳೆವಣಿಗೆಯುಳ್ಳ ಯಾವುದೇ ವಸ್ತುವನ್ನು ಜೀವಿಯೆಂದು ಪರಿಗಣಿಸುವುದು ಸೂಕ್ತ. ಆದರೆ ಈ ನಿರೂಪಣೆ ಎಲ್ಲ ಜೀವಿಗಳಿಗೂ ಅನ್ವಯಿಸುವುದಿಲ್ಲ. ನಿಷ್ಕ್ರಿಯವಾಗಿರುವಂತೆ ಕಾಣುವ ಶುಷ್ಕ ಬೀಜಗಳಿಗೆ ಹಾಗೂ ಒಣಗಿದ ಕೆಲವು ಎಲುಬುರಹಿತ ಪ್ರಾಣಿಗಳಿಗೆ ಸೂಕ್ತ ಪರಿಸರವನ್ನು ಒದಗಿಸಿದರೆ ಇವು ಕ್ರಿಯಾಶಿಲವಾಗಬಲ್ಲುವು. ಆದ್ದರಿಂದ ಜೀವಿಯ ಪ್ರಕೃತಿಯನ್ನು ನಿರೂಪಿಸುವಾಗ ಪ್ರಾಯೋಗಿಕ ಪರಿಸರದ ಸ್ಥಿತಿಗತಿಯನ್ನು ಪರಿಗಣಿಸುವುದು ಉತ್ತಮ. (b) ಜೀವದ್ರವ್ಯದ ಗುಣಲಕ್ಷಣಗಳು : ವರ್ಧನ ಕ್ರಿಯಾಶೀಲತೆಯಳ್ಳ ಜಿಗುಟಾದ ಸಾವಯವ ಪದಾರ್ಥಕ್ಕೆ ಜೀವದ್ರವ್ಯ (ಪ್ರೋಟೊಪ್ಲಾಸಮ್) ಎಂದು ಹೆಸರು. ಎಲ್ಲ ಜೀವಿಗಳಿಗೂ ಇದು ಮೂಲಾಧಾರ. ಇದನ್ನು ರಾಸಾಯನಿಕ ವಿಶ್ಲೇಷಣೆಗೆ ಗುರಿಪಡಿಸಿದಾಗ ಸಾವು ಸಂಭವಿಸುವುದು ಸಹಜ ; ಆದರೆ ಅದರ ದ್ರವ್ಯರಾಶಿಯಲ್ಲಿ ಬದಲಾವಣೆಯಾಗುವುದಿಲ್ಲ. ಜೀವದ್ರವ್ಯದಲ್ಲಿ ಮುಖ್ಯವಾಗಿ ನಾಲ್ಕು ಧಾತುಗಳು ಉಂಟು-62% ಆಕ್ಸಿಜನ್, 20% ಕಾರ್ಬನ್, 10% ಹೈಡ್ರೋಜನ್ ಮತ್ತು 3% ನೈಟ್ರೋಜನ್, ಇವುಗಳಲ್ಲಿ ಆಕ್ಸಿಜನ್ ಮತ್ತು ಹೈಡ್ರೋಜನುಗಳು ಜೀವಿಯ ತೂಕದ 50-90% ಪ್ರಮಾಣದಲ್ಲಿರುವ ನೀರಿನ ರೂಪದಲ್ಲಿರುತ್ತವೆ. ಜೀವದ್ರವ್ಯದ ಇನ್ನುಳಿದ 5% ರಲ್ಲಿ ಇತರ ಬಗೆಯ 30 ಧಾತುಗಳುಂಟು. ಜೀವದ್ರವ್ಯದ ಧಾತುಗಳನ್ನೂ ಅವುಗಳ ಮೊತ್ತಗಳನ್ನೂ ಮುಂದಿನ ಪಟ್ಟಿಯಿಂದ ತಿಳಿಯಬಹುದು.

ಭೂಸಸ್ಯಗಳಲ್ಲಿನ ಧಾತುಗಳು ಮತ್ತು ಅವುಗಳ ಸೇಕಡಾವಾರು ಪ್ರಮಾಣ : 
ಆಕ್ಸಿಜನ್ 
...
70
ಬೋರಾನ್
...   0.001

ಕಾರ್ಬನ್
...
18
ಜಿóಂಕ್
...   0.003

ಹೈಡ್ರೊಜನ್
...
10.5
ರುಬಿಡಿಯಮ್
...   0.002

ಕ್ಯಾಲ್ಸಿಯಮ್
...
0.5
ಟೈಟ್ಯಾನಿಯಮ್
...   0.001

ನೈಟ್ರೊಜನ್
...
0.3
ಕಾಪರ್ 
...   0.001

ಪೊಟ್ಯಾಸಿಯಮ್
...
0.3
ಬ್ರೋಮಿನ್
...   0.001

ಸಿಲಿಕಾನ್
...
0.15
ಮಾಲಿಬ್ಡಿನಮ್
...   0.00005

ಮೆಗ್ನೀಸಿಯಮ್
...
0.07
ಇಟ್ರಿಯಮ್ ಮತ್ತಿತರ

ಫಾಸ್ಫರಸ್
...
0.0
ವಿರಳ ವಸ್ತುಗಳು
...   0.00004

ಸಲ್ಫರ್
...
0.05
ನಿಕ್ಕಲ್
...   0.00002

ಕ್ಲೋರಿನ್
...
0.04
ವ್ಯಾನೇಡಿಯಮ್
...   ~0.00002

ಸೋಡಿಯಮ್
...
0.02
ಲೆಡ್
...   ~0.00002

ಐರನ್
...
0.02
ಲಿತಿಯಮ್
...   ~0.00001

ಮ್ಯಾಂಗನೀಸ್
...
0.007
ಯುರೇನಿಯಮ್
...   ~0.00001

ಪ್ಲೋರಿನ್
...
0.003
ಗ್ಯಾಲಿಯಮ್
...   ~0.00003

ಬೇರಿಯಮ್
...
0.003
ಕೋಬಾಲ್ಟ್
...   ~0.00002

ಅಲ್ಯೂಮಿನಿಯಮ್
...
0.002
ಅಯೋಡಿನ್
...   ~0.00001

ಸ್ಟ್ರಾನ್ಷಿಯಮ್
...
0.002
ರೇಡಿಯಮ್      0.0000000000001

	ನೆಲವಾಸಿಗಳಲ್ಲಿ ನೈಟ್ರೋಜನ್ ಮತ್ತು ಸೋಡಿಯಮ್ ಹೆಚ್ಚಾಗಿಯೂ ಪೊಟ್ಯಾಸಿಯಮ್, ಸಿಲಿಕಾನ್ ಮತ್ತು ಅಲ್ಯೂಮಿನಿಯಮುಗಳು ವಿರಳವಾಗಿಯೂ ಇವೆ. ಕಶೇರುಕಗಳಲ್ಲಿ ಕ್ಯಾಲ್ಸಿಯಮ್, ಕಡಲವಾಸಿಗಳಲ್ಲಿ ಕ್ಲೋರೈಡ್ ಅಧಿಕವಾಗಿವೆ. ಜೊತೆಗೆ ನೆಲವಾಸಿಗಳಲ್ಲಿ ನೀರು ಹೆಚ್ಚು ಮೊತ್ತದಲ್ಲಿದೆ. ಕೆಲವು ಜೀವಿಗಳಲ್ಲಿ ಅನೇಕ ವಸ್ತುಗಳ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುವುದುಂಟು. ಉದಾಹರಣೆಗೆ, ಆಸ್ಟ್ರಗ್ಯಾಲಸ್ ಸಸ್ಯದಲ್ಲಿ ಸೆಲೇನಿಯಮ್, ಲೈಕೋಪೋಡಿಯಮ್‍ನಲ್ಲಿ ಅಲ್ಯೂಮಿನಿಯಮ್, ಸಸ್ತನಿಗಳ ಕಣ್ಣುಗಳಲ್ಲಿ  ಬೇರಿಯಮ್, ಕಡಲ ಕಠಿಣ ಚರ್ಮಿಗಳಲ್ಲಿ ಆರ್ಸೆನಿಕ್ ಮತ್ತು ಕಡಲ ಪಿಚಕಾರಿ ಹಾಗೂ ಕೆಲವು ಶಿಲೀಂಧ್ರಗಳಲ್ಲಿ ವ್ಯಾನೇಡಿಯಮ್ ಸಂಗ್ರಹವಾಗುವುದು ತಿಳಿದಿದೆ. ಸಸ್ತನಿಗಳ ಯಕೃತ್ತಿನಲ್ಲಿ ರುಬಿಡಿಯಮ್ ಹೇರಳವಾಗಿಯೂ ಕೋಬಾಲ್ಟ್ ವಿರಳವಾಗಿಯೂ ಇವೆ. ಆದರೆ ಇವುಗಳ ಸಂಗ್ರಹಕ್ಕೂ ಈ ಅಂಗದ ಚಟುವಟಿಕೆಗಳೂ ಯಾವ ಸಂಬಂಧವೂ ಇಲ್ಲ. ಅಂತೆಯೇ ಕೆಲವು ಅಂಗಗಳ ಕೋಶಗಳಲ್ಲಿ ಸರಾಸರಿ 23 ಅಣುಗಳಷ್ಟು ಕಂಡು ಬರುವ ರೇಡಿಯಮ್ಮಿನ ಪಾತ್ರವೂ ಅಸ್ಪಷ್ಟ.

(i) ಸಂಯುಕ್ತಗಳು : ಮೇಲಿನ ಧಾತುಗಳಿಂದಾದ ರಚನಾತ್ಮಕ ಹಾಗೂ ಕ್ರಿಯಾತ್ಮಕ ಸಂಯುಕ್ತ ವಸ್ತುಗಳು ಎಲ್ಲ ಬಗೆಯ ಜೀವದ್ರವ್ಯಗಳಲ್ಲೂ ಉಂಟು. ವಿಶೇಷವಾಗಿ ಕಾರ್ಬನ್, ಆಕ್ಸಿಜನ್, ಹೈಡ್ರೋಜನ್ ಮತ್ತು ನೈಟ್ರೋಜನುಗಳಿಂದೊಡಗೂಡಿದ ಶರ್ಕರಪಿಷ್ಟ, ಕೊಬ್ಬು ಮತ್ತು ಪ್ರೋಟೀನುಗಳು ಜೀವದ್ರವ್ಯದ ಕಾರ್ಯವ್ಯಾಪ್ತಿಯ ಮೂಲಾಧಾರಗಳಾಗಿವೆ. ಇವು ಬಿಡಿಬಿಡಿಯಾಗಿಯೂ ಇರಬಹುದು. ಇಲ್ಲವೆ ಎರಡು ಮೂರು ಒಂದುಗೂಡಿ ಉಂಟಾದ ಸಂಯುಕ್ತ ರೂಪದಲ್ಲಿರಬಹುದು. ಇನಾಗ್ರ್ಯಾನಿಕ್ ಸಂಯಕ್ತಗಳು ದ್ರವ ರೂಪದಲ್ಲಿದ್ದಾಗ ಅನಂತಸೂಕ್ಷ್ಮ ಅಯಾನುಗಳಾಗಿ ಛಿದ್ರಛಿದ್ರವಾಗುವುದರಿಂದ ಜೀವದ್ವ್ಯದ ಠಿಊ ವ್ಯತ್ಯಾಸವಾಗುವುದುಂಟು. ಆದ್ದರಿಂದ ಜೀವದ್ರವ್ಯಕ್ಕೆ ಆಮ್ಲೀಯವೂ ಅಲ್ಲದ, ಕ್ಷಾರೀಯವೂ ಅಲ್ಲದ, ಅಂತೆಯೇ ವಿದ್ಯುತ್ ಧನವಾಗಲೀ ಋಣವಾಗಲೀ ಅಲ್ಲದ ತಟಸ್ಥಗುಣ ಇದೆ. ಪ್ರತಿಯೊಂದು ಜೀವವ್ಯವಸ್ಥೆಗೂ ಒಂದು ನಿರ್ದಿಷ್ಟ ಬಗೆಯ ಠಿಊ ಮಟ್ಟ ಉಂಟು. ಇದರಲ್ಲಿ ಮಹತ್ತ್ವದ  ಏರುಪೇರುಗಳುಂಟಾದರೆ ಸಾವು ಸನ್ನಿಹಿತವಾದಂತೆಯೇ.

(ii) ಕಿಣ್ವಗಳು : ಪ್ರೋಟೀನುಯುಕ್ತ ಬೃಹದಣುಗಳಾದ ಇವು ಸಾವಯವ ವೇಗವರ್ಧಕಗಳು ; ದೇಹದ ಸೌಮ್ಯ ಪರಿಸರದಲ್ಲಿ ನಾನ ಕ್ರಿಯೆಗಳಲ್ಲಾಗುವ ವಿವಿಧ ರಾಸಾಯನಿಕ ಬದಲಾವಣೆಗಳಿಗೆ ಇವು ಸೂತ್ರಧಾರಿಗಳು. ಇವು ಅಮೈನೋ ಆಮ್ಲಗಳಿಂದ ರಚಿತವಾಗಿರುವುದರಿಂದ ವಿದ್ಯುತ್ಪ್ರವೃತ್ತಿಯನ್ನು ತೋರುವುವು. ತಮ್ಮ ಕ್ರಿಯಾಶೀಲತೆಗಾಗಿ ಕೆಲವು ಕಿಣ್ವಗಳು ಸಹಕಿಣ್ವಗಳ ಪ್ರಯೋಜನ ಪಡೆಯುವುವಲ್ಲದೆ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸತುಗಳ ಸಂಪರ್ಕದಿಂದ ಕಾರ್ಯದಕ್ಷತೆ ತೋರುವುವು. ವೈಟಮಿನ್ನುಗಳಾದ ತಯಮಿನ್ (ಃ1), ನಯಾಸೀನ್, ರೈಬೋಫ್ಲೇವಿನ್ (ಃ2) ಮತ್ತು ಪಿರಿಡಾಕ್ಸಿನ್ (ಃ6) ಗಳು ಕಿಣ್ವಗಳೊಡನೆ ಕೂಡಿದಾಗಲೇ ಕ್ರಿಯಾಶಿಲವಾಗುತ್ತವೆ. ವಾಸ್ತವವಾಗಿ, ಇವು ಜೀವಿಗೆ ಅತ್ಯವಶ್ಯವಾದ ಉಪರಾಸಾಯನಿಕಗಳು. ಅಡೆನೋಸೀನ್ ಫಾಸ್ಫಟೇಸ್ ಕಿಣ್ವ ಆಕ್ಟೋಮಯೋಸಿನ್‍ನೊಡನೆ ಕಲೆತಾಗಲೇ ಮಾಂಸಖಂಡಗಳಿಗೆ ಸಂಕೋಚಶಕ್ತಿ ಬರುವುದು.

(iii) ವಿದ್ಯುತ್ ಸ್ವಭಾವ : ಎಲ್ಲ ತೆರನ ದೇಹಕ್ರಿಯೆಗಳೂ ವಿದ್ಯುತ್ತಿನ ಬದಲಾವಣೆಯ ಸೂಚಕಗಳು ಎಂದು ತಿಳಿಯಲಾಗಿದೆ. ಆದ್ದರಿಂದಲೇ ರೋಗಿಯ ಹೃದಯದ ಕ್ರಿಯಗತಿಯನ್ನು ಅಳೆಯಲು ಹಿಂದಿನಿಂದಲೂ ವಿದ್ಯುತ್ ಹೃದಯಲೇಖಕವನ್ನು (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಬಳಸುತ್ತಿದ್ದಾರೆ. ಶರೀರಕ್ಕೂ ವಿಭವಮಾಪನಕ್ಕೂ (ಪೊಟೆನ್ಶಿಯೊಮೀಟರ್) ಸಂಪರ್ಕ ಕಲ್ಪಿಸಿದಾಗ ದೇಹದ ವಿದ್ಯುತ್ಕ್ರಮಾನುಗತಿ ವ್ಯಕ್ತವಾಗುವುದು. ಅಂತೆಯೇ ಅನೇಕ ರಾಸಾಯನಿಕ ಕ್ರಿಯೆಗಳಿಗೂ ವಿದ್ಯುತ್ತಿನ ಏರಿಳಿತಗಳೇ ಕಾರಣ. ಕೋಶದ್ರವ್ಯದಲ್ಲಿ (ಸೈಟೋಪ್ಲಾಸಮ್) ಆಗುವ ಅಯಾನೀಕರಣ, ವಸ್ತುಗಳ ವಿಸರಣೆ (ಡಿಫ್ಯೂಷನ್) ಮತ್ತು ಪೊರೆಯಲ್ಲಿ ಉದ್ಭವಿಸುವ ವಿಭವಶಕ್ತಿ ಜೀವ ದ್ರವ್ಯದ ವಿದ್ಯುತ್ ಸ್ವಭಾವಕ್ಕೆ ಒಂದು ನಿದರ್ಶನ. ಆದರೆ ಎಲ್ಲ ಜೀವಕ್ರಿಯೆಗಳಲ್ಲು ವಿದ್ವುತ್ತು ಸಮಾನಪಾತ್ರ ವಹಿಸುವುದೆಂದು ಹೇಳಲಾಗದು. ಇದರಲ್ಲಿ ಅನೇಕ ಅನ್ಯ ಘಟಕಗಳೂ ನೆರವಾಗಬಹುದು.

(iv) ದ್ಯುತಿ ಪಟುತ್ವ (ಆಪ್ಟಿಕಲ್ ಆಕ್ಟಿವಿಟಿ) : ಲೂಯಿ ಪ್ಯಾಸ್ತರನ ಪ್ರಕಾರ, ಜೀವಿಗಳನ್ನು ಗುರುತಿಸಲು ಈ ಗುಣ ಅತ್ಯುತ್ತಮ ಸಾಧನ. ಎಲ್ಲ ಜೀವಿಗಳ ಆಗ್ರ್ಯಾನಿಕ್ ವಸ್ತುಗಳಲ್ಲಿ ಅಸಮಾಂಗೀಯ ಕಾರ್ಬನ್ ಅಣುವಿರುತ್ತದೆ. ಚತುರ್ಮುಖಿ ಕಾರ್ಬನ್ನಿನ ನಾಲ್ಕು ನಿಟ್ಟಿನಲ್ಲೂ ವಿವಿಧ ಪರಮಾಣು ಪಂಜಗಳು ಬಂಧಿತವಾಗಿರುವುದರಿಂದ ಭಿನ್ನರೂಪದ ಬಿಂಬೋದ್ಭವವಾಗುವುದು. ಆದ್ದರಿಂದಲೇ ವಿವಿಧ ಕಿಣ್ವಗಳ ವಿದೃಶ ಕಾರ್ಯಾಚರಣೆ ಸಾಧ್ಯವೆಂದು ನಂಬಲಾಗಿದೆ.

(v) ಇತರ ಗುಣಗಳು : ಜೀವಿಗಳಲ್ಲಿ ಸರ್ವ ಕಾರ್ಯಗಳೂ ಯಾವಾಗಲೂ ಒಂದೇ ಸಮನಾಗಿ ಜರುಗುವುದಿಲ್ಲ ; ಇದಕ್ಕೆ ಆಂತರಿಕ ಹಾಗೂ ಬಾಹ್ಯ ಬದಲಾವಣೆಗಳೇ ಬಹುವಾಗಿ ಕಾರಣ. ಅಂತೆಯೇ ಪ್ರತಿಜೀವಿಯೂ ತನ್ನ ರೂಪುರೇಖೆಗಳನ್ನು ರಕ್ಷಿಸಿಕೊಂಡು ಸುಗಮವಾಗಿ ಬಾಳಬೇಕಾದರೆ ಸೂಕ್ತ ಶಕ್ತಿಸಂಪನ್ನ ವಸ್ತುಗಳ ಪೂರೈಕೆ ಸತತವಾಗಿರಬೇಕು. ಹಾಗಿಲ್ಲದಿದ್ದರೆ ಸಾವು ಸಂಭವಿಸುತ್ತದೆ. ಜೀವನಾಧಾರ ಸತ್ತ್ವವು ಜೀವಿಗೆ ಎರಡು ನಿಟ್ಟಿನಿಂದ ಒದಗುವುದು ; ಸಮೀಪವರ್ತಿ ಸತ್ತ್ವಪೂರ್ಣ ರಾಸಾಯನಿಕ ಸಂಯುಕ್ತಗಳಿಂದ ಶಕ್ತಿ ಪಡೆಯುವುವಲ್ಲದೆ, ಜೀವಿಗಳು ಪರಿಸರದ ವಿಸರಿತ ಶಕ್ತಿಯನ್ನೂ (ರೇಡಿಯಂಟ್ ಎನರ್ಜಿ) ಉಪಯೋಗಿಸಿಕೊಳ್ಳುತ್ತವೆ. ಕೆಲವು ಬ್ಯಾಕ್ಟೀರಿಯಗಳು ಹೆಚ್ಚಾಗಿ ವಿಸರಿತ ಶಕ್ತಿಯಿಂದಲೇ ಜೀವಿಸುತ್ತವೆ. ಆದರೆ ಇನ್ನುಳಿದ ಜೀವಿಗಳು ಸಸ್ಯಾಹಾರದಲ್ಲಿ ಸಂಗ್ರಹವಾಗಿರುವ ರಾಸಾಯನಿಕ ಶಕ್ತಿಯನ್ನು ಅವಲಂಬಿಸಿರುತ್ತವೆ.

ಕೃತಕ ಹಾಗೂ ಸ್ವಾಭಾವಿಕ ಐಸೊಟೊಪುಗಳ ಬಳಕೆಯಿಂದಾಗಿ ಜೀವಿಗಳಲ್ಲಾಗುವ ನಾನಾ ರಾಸಾಯನಿಕ ಕ್ರಿಯಾವಿಧಾನಗಳನ್ನು ಖಚಿತವಾಗಿ ತಿಳಿಯಲು ಸಾಧ್ಯವಾಗಿದೆ. 1923ರಲ್ಲಿ ಡ ಹೆವೆಸಿ ಎಂಬುವವ ಮೊಟ್ಟಮೊದಲಿಗೆ ಸಸ್ಯಗಳಲ್ಲಿ ಐಸೊಟೋಪುಗಳನ್ನು ಉಪಯೋಗಿಸಿ ಸೀಸದ ಸಾಗಾಣಿಕೆಯನ್ನು ಅಭ್ಯಸಿಸಿದ. ಆನಂತರ ಎ. ಕ್ರೋಗ್ ಎಂಬಾತ ಫಾಸ್ಫರಸ್ ಐಸೋಟೋಪನ್ನೂ, ಆರ್ ಷೀನ್‍ಹೈಮರ್ ಎಂಬಾತ ಹೈಡ್ರೋಜನ್ ಮತ್ತು ನೈಟ್ರೋಜನುಗಳ ಐಸೊಟೋಪುಗಳನ್ನೂ ಉಪಯೋಗಿಸಿ ಈ ತಂತ್ರವೃದ್ಧಿಗೆ ನೆರವಾದರಲ್ಲದೆ ಅದುವರೆಗೆ ಭದ್ರವಾಗಿ ಬೇರೂರಿದ್ದ ಅನೇಕ ಸಿದ್ಧಾಂತಗಳನ್ನು ಬುಡಮೇಲು ಮಾಡಿ. ಜೀವವಿಜ್ಞಾನ ಅಧ್ಯಯನದಲ್ಲಿ ಕ್ರಾಂತಿಯೆಬ್ಬಿಸಿದರು. ನಾವು ಸೇವಿಸಿದ ಆಹಾರವು ಶಕ್ತಿಪೂರೈಕೆಗೆ ಮಾತ್ರ ಆವಶ್ಯವೆಂದು ಇತ್ತೀಚಿನವರೆಗೂ ತಿಳಿಯಲಾಗಿತ್ತು. ಆದರೆ ಹೈಡ್ರೋಜನ್ನಿಗೆ ಬದಲಾಗಿ ಡ್ಯೂಟೀರಿಯಮ್ ಇರುವ ಆಹಾರವನ್ನು ಸೇವಿಸಿದಾಗ ಅದು ನೇರವಾಗಿ ಮಲಮೂತ್ರಗಳಲ್ಲಿ ವಿಸರ್ಜನೆಯಾಗುವ ಬದಲು ವಿವಿಧಾಂಗಗಳಿಗೆ ರವಾನೆಯಾಗುವುದು ತಿಳಿದಿದ್ದರಿಂದ ಸಂವರ್ಧನ ಕ್ರಿಯೆಯ ಮೇಲೆ ಹೊಸ ಬೆಳಕು ಚಲ್ಲಿದೆ 15ಓ ಬಳಕೆಯಿಂದ ಕ್ರಿಯಾಟಿನ್ ಪರಿವರ್ತನೆಯ ಅರಿವಾದದ್ದಲ್ಲದೆ, ಕೊಬ್ಬಿನ ಪಚನ ಹಾಗೂ ಸ್ವಾಂಗೀಕರಣದ ವಿಧಾನ ತಿಳಿದುಬಂತು. ಐಸೊಟೋಪುಗಳ ಉಪಯೋಗ ತಿಳಿಯುವುದಕ್ಕೆ ಮೊದಲು, ಕೋಳಿಯ ತತ್ತಿಗಳ ಮೇಲಿನ ಕವಚ ಎಲುಬುಗಳಿಂದಾಗುತ್ತದೆಂಬ ಭಾವನೆ ಬೇರೂರಿತ್ತು. ಆದರೆ ಇದು ತಪ್ಪು ಎಂಬುದು ಈಗ ಗೊತ್ತಾಗಿದೆ. ಒಟ್ಟಿನಲ್ಲಿ ಎಲ್ಲ ಜೀವಿಗಳಲ್ಲು ಚಯಾಪಚಯ ಕ್ರಿಯೆಗಳು ಸತತವಾಗಿ ನಡೆಯುತ್ತಿರುತ್ತವೆಂದು ಈ ಎರಡೂ ಕ್ರಿಯೆಗಳ ಏರುಪೇರು ಜೀವಿಯ ಬೆಳೆವಣಿಗೆ ಅಥವಾ ಸಾವಿಗೆ ಮೂಲವೆಂದೂ ಐಸೋಟೋಪುಗಳ ನೆರವಿನಿಂದ ಖಚಿತವಾಗಿದೆ.

(vi) ಕೋಶ ರಚನೆ: ಜೀವದ್ರವ್ಯವನ್ನು ಒಳಗೊಂಡ ಜೀವಕೋಶಗಳು ಜೀವಿಯ ದೇಹರಚನೆಯ ತಳಹದಿ. ಸುಮಾರು 2,000 ವರ್ಷಗಳ ಹಿಂದೆಯೇ ಅರಿಸ್ಟಾಟಲನು ಕೇವಲ ತರ್ಕದಿಂದಲೇ ಜೀವಕೋಶದ ಕಾಲ್ಪನಿಕ ಸಿದ್ದಾಂತವನ್ನು ನಿರೂಪಿಸಿದ್ದರೂ 1665ರಲ್ಲಿ ರಾಬರ್ಟ್ ಮಾಡಿದ ಹೂಕ್ ಮಾಡಿದ ಬಿರಡೆಯ ಪರೀಕ್ಷೆಯಿಂದಾಗಿ ಜೀವಕೋಶದ ಇರವು ಖಚಿತವಾಯಿತು. ಸಮಸ್ತ ಚಟುವಟಿಕೆಗಳೂ ಒಚಿದೇ ಕೋಶದಲ್ಲಿ ಜರುಗುವಂಥ ಏಕಕೋಶ ಜೀವಿಗಳನ್ನೂ ಕಾರ್ಯವಿಂಗಡಣೆಯನ್ನು ತೋರುವ ಅನೇಕ ಕೋಶಗಳುಳ್ಳ ಬಹುಕೋಶಜೀವಿಗಳನ್ನೂ ಗುರುತಿಸಬಹುದು. ಬಹುಕೋಶಜೀವಿಗಳ ಜೀವನವು ಪ್ರಥಮವಾಗಿ ಏಕಕೋಶದಿಂದಲೇ ಪ್ರಾರಂಭವಾಗುವುದು. ಜೀವಕೋಶದ ರಚನೆ ಹಾಗೂ ಕ್ರಿಯಾವಿನ್ಯಾಸಗಳನ್ನು ಗುರುತಿಸಿದ 1838ರ ವೇಳೆಗೆ ಎಂ.ಜೆ.ಷ್ಲೀಡನ್ ಮತ್ತು ತೀಯೊಡೋರ್ ಷ್ವಾನ್ ಎಂಬಿಬ್ಬರು ಕೋಶತತ್ತ್ವವನ್ನು (ಸೆಲ್ ತಿಯರಿ) ನಿರೂಪಿಸಿದರು. ಈ ತತ್ತ್ವದ ಪ್ರಕಾರ, ಕೋಶಗಳು ಎಲ್ಲ ಉನ್ನತ ಜೀವಿಗಳ ದೇಹರಚನೆಯ ಮೂಲಘಟಕಗಳೆಂದು ಪರಿಗಣಿಸಲಾಗಿದೆ.

ಜೀವಿಗಳ ರೂಪು, ರಚನೆಗಳು ಒಂದೇ ತೆರನಾಗಿರುವುದಿಲ್ಲ. ಸ್ಥಾನ, ಕರ್ತವ್ಯಗಳಿಗೆ ಅವಸಾರವಾಗಿ ಇವು ಬದಲಾಗುತ್ತವೆ. ಆದರೆ, ಎಷ್ಟೇ ವೈವಿಧ್ಯವನ್ನು ತೋರಿದರು ಜೀವಕೋಶಗಳ ಸ್ಥೂಲ ರಚನೆಯಲ್ಲಿ ಏಕರೂಪತೆಯನ್ನು ಕಾಣಬಹುದು. ಜೀವದ್ರವ್ಯವನ್ನು ಆವರಿಸಿರುವ ಕೋಶಪಟಲವೂ ಮಧ್ಯದಲ್ಲಿ ಅಡಗಿರುವ ನೂಕ್ಲಿಯಸ್ಸೂ ಎಲ್ಲ ಕೋಶಗಳಲ್ಲು ಕಂಡುಬರುತ್ತವೆ. ನ್ಯೂಕ್ಲಿಯಸ್ಸಿನ ಹೊರಗೆ ಇರುವ ದ್ರವಕ್ಕೆ ಕೋಶದ್ರವ್ಯ (ಸೈಟೊಪ್ಲಾಸಮ್ ಎಂದು ಹೆಸರು. ನ್ಯೂಕ್ಲಿಯಸಿನಲ್ಲಿ ನ್ಯೂಕ್ಲಿಯರ್ ದ್ರವ, ಕ್ರೋಮೊಸೋಮುಗಳು, ಗೋಲಾಕಾರದ ನ್ಯೂಕ್ಲಿಯೋಲೈಟುಗಳುಂಟು. ಕೋಶದ್ರವ್ಯದಲ್ಲಿ ಎಳೆಯಾಕಾರದ ಮೈಟೊಕಾಂಡ್ರಿಯ, ಅತ್ಯಂತ ಸೂಕ್ಷ್ಮಗಾತ್ರದ ಮೈಕ್ರೊ ಸೋಮು ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೋಟೀನ್ ವಸ್ತುಗಳೂ ಇವೆ. ಪ್ರಾಣಿಕೋಶಗಳಲ್ಲಿ ಗಾಲ್ಜಿ ವ್ಯವಸ್ಥೆ ಹಾಗೂ ಸೆಂಟ್ರೋಸೋಮುಗಳು ಉಂಟು. ಆದರೆ ಸಸ್ಯಗಳಲ್ಲಿ ಪ್ಲಾಸ್ಟಿಡುಗಳೂ ರಸದಾನಿಗಳೂ ಇವೆಯಲ್ಲದೆ ಕೋಶಪಟಲದ ಹೊರಭಾಗದಲ್ಲಿ ಕೋಶಭಿತ್ತಿಯೊಂದುಂಟು. ಎಲ್ಲ ಜೀವಿಗಳ ಕ್ರೋಮೊ ಸೋಮುಗಳಲ್ಲೂ ಡೀ ಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ ಇದೆ. ಕ್ರೋಮೊಸೋಮುಗಳು ತಾಯಿತಂದೆಯರ ಗುಣಲಕ್ಷಣಗಳನ್ನು ಮಕ್ಕಳಿಗೆ ಒಯ್ಯುತ್ತವೆ.
ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದಾಗಿ ಕೋಶದ್ರವ್ಯದಲ್ಲಿರುವ ಬಲೆಯಾಕಾರದ ಪಟಲವ್ಯವಸ್ಥೆಯ (ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್) ಮತ್ತು ಮೈಟೊ ಕಾಂಡ್ರಿಯಗಳ ಸೂಕ್ಷ್ಮ ರಚನೆಗಳು ವ್ಯಕ್ತವಾಗಿವೆ.

(vii) ಪ್ರತಿಸ್ಪಂದನ ಮತ್ತು ಹೊಂದಾಣಿಕೆ (ಇರಿಟಬಿಲಿಟೀ ಅಂಡ್ ಅಡ್ಯಾಪ್ಟಬಿಲಿಟೀ) : ಪ್ರತಿಯೊಂದು ಜೀವಿಯೂ ತಾನು ಬಾಳಿ ಬದುಕುವ ಪರಿಸರದ ಪ್ರೇರಣೆಗಳಿಗೆ ತಾನಾಗಿಯೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತದೆ. ಪರಿಸ್ಥತಿಯಲ್ಲಾಗುವ ವೈಪರೀತ್ಯಗಳನ್ನು ಪ್ರಚೋದನೆ ಎನ್ನಬಹುದು. ಇದರ ವಿರುದ್ಧವಾಗಿ ಜೀವಿ ಸ್ವಂತ ಅರವಿನಿಂದ ತೋರುವ ಪ್ರತಿಕ್ರಿಯೆಗೆ ಸಂವೇದನೆ (ಸೆನ್ಸಿಟಿವಿಟಿ) ಎಂಬ ಹೆಸರು. ಪ್ರಚೋದನೆಗಳು ಜೀವಿಯ ಬಾಹ್ಯ ಪ್ರಪಂಚದಲ್ಲಿ ಆಗುವ ಶೀತ-ಉಷ್ಣತೆಗಳ ಬದಲಾವಣೆ, ಒತ್ತಡ ಮುಂತಾದವಾಗಿರಬಹುದು. ಇಲ್ಲವೆ ಆಂತರಿಕ ರಾಸಾಯನಿಕ ಕ್ರಿಯೆಗಳಿಂದ ಉದ್ಭವಿಸುವ ವೈಪರೀತ್ಯಗಳಾಗಿರಬಹುದು. ಈ ಬಗೆಯ ಬದಲಾವಣೆಗೆ ತಕ್ಕಂತೆ ತಮ್ಮ ಜೀವನದ ಧಾಟಿಯನ್ನು ಹೊಂದಿಸಿಕೊಂಡು ಬದುಕುವುದು ಜೀವಿಗಳ ಲಕ್ಷಣ. ಮದ್ದಿಗೆ ಬೆಂಕಿಯ ಕಿಡಿ ಬಿದ್ದರೆ ಮದ್ದು ಸಿಡಿದು ಪ್ರತಿಕ್ರಿಯೆ ಗೋಚರವಾಗುವುದು. ಆದರೆ ಈ ತೆರನ ಪ್ರತಿಕ್ರಿಯೆಗೂ ಜೀವಿ ತೋರುವ ಪ್ರತಿಕ್ರಿಯೆಗೂ ವ್ಯತ್ಯಾಸ ಉಂಟು. ಸಿಡಿದ ಮದ್ದು ನಾಶವಾಗುತ್ತದೆ. ಆದರೆ ಜೀವಿಯಾದರೋ ತನ್ನ ವ್ಯಕ್ತಿತ್ವವನ್ನು ಉಳಿಸಿಕೊಂಡೇ ಇರುತ್ತದೆ. ಅಂದರೆ, ಮದ್ದಿನ ಪ್ರತಿಸ್ಪಂದನ ವಿನಾಶಾತ್ಮಕ, ಜೀವಿಯದು ರಚನಾತ್ಮಕ, ಜೀವಿಗಳ ಪ್ರತಿಯೊಂದು ಪ್ರತಿಕ್ರಿಯೆಯೂ ಅವುಗಳ ಹೊಂದಾಣಿಕೆಗೆ ಹಾಗೂ ಪ್ರಗತಿಗೆ ನೆರವಾಗುತ್ತದೆ.

ಒಟ್ಟಾರೆ ಜೀವಿಯ ಲಕ್ಷಣಗಳನ್ನು ನಾಲ್ಕು ಭಾಗಗಗಳಾಗಿ ವಿಂಗಡಿಸಬಹುದು : (i) ಜೀವಿಯಾಗಲು ಜೀವದ್ರವ್ಯಗಳು ಬೇಕು. (ii) ಅದು ಪರಿಸರಕ್ಕೆ ತಕ್ಕಂತೆ ಪ್ರತಿಕ್ರಿಯೆ ತೋರುವುದಲ್ಲದೆ ಹೊಂದಿಕೊಂಡು ಬಾಳುವ ಸಾಮಥ್ರ್ಯ ಪಡೆದಿರಬೇಕು. (iii) ಸೇವಿಸಿದ ಆಹಾರವನ್ನು ಸಂವರ್ಧನ ಕ್ರಿಯೆಯಿಂದ ಮೈಗೂಡಿಸಿ ಕೊಂಡು ಬೆಳೆಯಬೇಕು. (iv) ಪೀಳಿಗೆಯ ವೃದ್ಧಿಗಾಗಿ ಪ್ರಜನನ ಸಾಮಥ್ರ್ಯ ಪಡೆದಿರಬೇಕು. ಹಾಗಿದ್ದರೆ ಮಾತ್ರ ಅದು ಜೀವ, ಇಲ್ಲವಾದರೆ ಅಜೀವ.
4 ಜೀವ ಜಗತ್ತು : (ಚಿ) ಜೀವಿಯ ವ್ಯಾಪ್ತಿ ; ನೆಲ, ನೀರು ಹಾಗೂ ಅಂತರಿಕ್ಷಗಳಲ್ಲದೆ ಮಂಜು ಕವಿದ ಪರ್ವತಪ್ರದೇಶ ಮತ್ತು ಮೇರುಪ್ರದೇಶಗಳಲ್ಲೂ ಜೀವಿಗಳುಂಟು. ಬ್ಯಾಕ್ಟೀರಿಯಗಳೂ ಮತ್ತು ಶೀಲೀಂಧ್ರಗಳ ಬೀಜಕಗಳೂ ಅಂತರಿಕ್ಷದಲ್ಲಿ 1000m. ಎತ್ತರದವರೆಗೂ ಪಸರಿಸಿದೆ. ಹಿಮವತ್ಪರ್ವತದ 8235 m ಎತ್ತರದಲ್ಲಿ ಪಕ್ಷಿಗಳು ಹಾರಾಡುವುದುನ್ನು ಗುರುತಿಸಿದ್ದಾರೆ. ಆರ್.ಡಬ್ಲ್ಯೂ. ಜಿ. ಹಿಂಗ್‍ಸ್ಟನ್ ಎಂಬುವ ಎವರೆಸ್ಟ್ ಪ್ರದೇಶ  6710m. ಗಳ ಎತ್ತರದಲ್ಲಿ ಜಿಗಿ ಜೇಡಗಳನ್ನು ಕಂಡ ಋತುಗಳಿಗೆ ಅನುಗುಣವಾಗಿ ಆಗುವ ಹವಾಗುಣದ ವ್ಯತ್ಯಾಸಗಳಿಂದಲೂ ಭೂಮಧ್ಯರೇಖೆಯ ಇಕ್ಕಡೆಗಳಲ್ಲಿ ಶೀತೋಷ್ಣ ಹಾಗೂ ಬೆಳಕಿನ ಏರಿಳಿತಗಳಿಂದಾಗಿಯೂ ಭೂವಾಸಿಗಳ ವ್ಯಾಪ್ತಿಯಲ್ಲಿ ವೈವಿಧ್ಯ ಎದ್ದು ಕಾಣುತ್ತದೆ. ಮರುಭೂಮಿ, ಗುಹೆ ಮತ್ತು ದಟ್ಟಕಾಡುಗಳೂ ಅನೇಕ ಜೀವಿಗಳ ಬೀಡು. ಸೂರ್ಯನ ಬೆಳಕು ಇಲ್ಲದಿರುವಂಥ ಸಮುದ್ರಾಂತರಾಳದಲ್ಲಿ ಸಸ್ಯಗಳು ವಿರಳವಾದರು ಬಹುತೇಕ ಪ್ರಾಣಿಗಳು ಇಡೀ ಜೀವಮಾನವನ್ನು ಆಲ ಸಮುದ್ರಗಳಲ್ಲಿಯೇ ಕಳೆಯುವುವು. ಕಡಲವಾಸಿಗಳಿಗಿಂತ ಸಿಹಿನೀರಿನ ಜಲಾಶಯಗಳಲ್ಲಿ ಜೀವಿಗಳ ವ್ಯಾಪ್ತಿ ಬಹಳ ಕಮ್ಮಿ. ಜೀವಿಗಳ ಅಳಿವೂ ಉಳಿವೂ ಪರಿಸರಕ್ಕೆ ಅನುಗುಣವಾಗಿರುವುದರಿಂದ ಸೂಕ್ತ ರಚನಾವೈವಿಧ್ಯ ಜೀವಿಗಳಲ್ಲಿ ಹೇರಳ. ವರ್ಣವಿನ್ಯಾಸ, ರಚನಾವೈಖರಿ, ಅಂಗಾಂಗಗಳ ಮಾರ್ಪಾಟುಗಳೇ ಮುಂತಾದ ವಿಶಿಷ್ಟ ಸಿದ್ಧತೆಗಳು ವಿವಿಧ ಪರಿಸರಕ್ಕೆ ಹೊಂದಿಕೊಳ್ಳಲು ಜೀವಿಗಳು ಗಳಿಸಿರುವ ಸೂಕ್ತಸಾಧನಗಳು.

(b) ದ್ಯುತಿಸಂಶ್ಲೇಷಣೆ ಮತ್ತು ಶಕ್ತಿಚಕ್ರ : ಜೀವಿಯ ನಾನಾ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯವಾದ ಶಕ್ತಿಯ ಗಳಿಕೆ, ಬಳಕೆ ಮತ್ತು ವ್ಯಯಗಳು ಪ್ರಕೃತಿಯಲ್ಲಿ ವಿವಿಧ ರೂಪಗಳಲ್ಲಿ ಕಾಣುತ್ತವೆ. ಹರಿತ್ತು ಇರುವ ಸಸ್ಯಗಳು, ಭೂಮಿಯಿಂದ ಖನಿಜ ಲವಣಗಳನ್ನೂ ನೀರನ್ನೂ ವಾಯುವಿನಿಂದ ಕಾರ್ಬನ್ ಡೈ ಆಕ್ಸೈಡನ್ನೂ ಹೀರಿಕೊಂಡು ಸೂರ್ಯರಶ್ಮಿಯ ಶಕ್ತಿಯ ನೆರವಿನಿಂದ. ಸರ್ವಜೀವಿಗಳಿಗೂ ಶಕ್ತಿಯ ಮೂಲಾಧಾರವಾದ ಸರಳ ಸಕ್ಕರೆಯ ಸಂಶ್ಲೇಷಣೆಯ ಜೊತೆಗೆ ಆಕ್ಸಿಜನನ್ನನ್ನು ಉತ್ಪಾದಿಸುತ್ತವೆ. ಇದೇ ದ್ಯುತಿಸಂಶ್ಲೇಷಣೆ. ಈ ಕ್ರಿಯೆಯನ್ನು ಮುಂದಿನ ಸರಳ ಸಮೀಕರಣದಿಂದ ನಿರೂಪಿಸಬಹುದು.
6ಅಔ2 + 6ಊ2ಔ 		 ಅ6ಊ12ಔ6 + 6ಔ2
ಉತ್ಪತ್ತಿಯಾದ ಆಕ್ಸಿಜನ್ ವಾಯಮಂಡಲವನ್ನು ಸೇರುತ್ತದೆ. ಸಕ್ಕರೆ ಎಲ್ಲ ಜೀವಿಗಳ ಕಾರ್ಯಚಟುವಟಿಕೆ ಮತ್ತು ಬೆಳೆವಣಿಗೆಗಳಿಗೆ ಅತ್ಯುಪಯುಕ್ತ ವಸ್ತು. ಅಂದರೆ, ಜೀವಜಗತ್ತಿನಲ್ಲಿ ಉತ್ಕರ್ಷಣವಾದ ಮತ್ತು ಅಪಕರ್ಷಣವಾದ ವಸ್ತುಗಳ ಎರಡು ವಲಯಗಳ ಸೃಷ್ಟಿಯಾಗುತ್ತದೆ. ಈ ವಸ್ತುಗಳು ಕಾಲ ಕ್ರಮೇಣ ಭೂಗತವಾದರೂ ನಿಸರ್ಗ ನಿಯಮಕ್ಕೊಳಗಾದ ಜ್ವಾಲಾಮುಖಿಗಳಿಂದಾಗಿ ಸಸ್ಯಗಳು ದ್ಯುತಿಸಂಶ್ಲೇಷಣೆಗೆ ಆವಶ್ಯಕವಾದ ಕಾರ್ಬನ್ ಡೈಆಕ್ಸೈಡ್ ನಿರಂತರವೂ ಒದಗುತ್ತದೆ. ಸೌರಶಕ್ತಿಯ ಕೇವಲ 0.068% ರಷ್ಟು ಮಾತ್ರ ಈ ಬಗೆಯ ಸಂಶ್ಲೇಷಣೆಗೆ ಉಪಯೋಗವಾಗುತ್ತದೆ. ಸಂಗ್ರಹವಾದ ಶಕ್ತಿಯಲ್ಲಿ 30% ರಷ್ಟನ್ನು ಸಸ್ಯಗಳೇ ಉಪಯೋಗಿಸಿಕೊಳ್ಳೂತ್ತವೆ ; 10% ರಷ್ಟನ್ನು ಸಸ್ಯಾಹಾರಿ ಪ್ರಾಣಿಗಳು ಪಡೆಯುತ್ತವೆ. ಉಳಿದ ಸುಮಾರು 40% ಭಾಗವನ್ನು ಸಸ್ಯಗಳು ಸತ್ತ ತರುವಾಯ ಬ್ಯಾಕ್ಟೀರಿಯಗಳು ಕೊಳೆಯಿಸಿ ಶಾಖದ ರೂಪದಲ್ಲಿ ಬಿಡುಗಡೆಯಾಗುತ್ತವೆ.

(ಛಿ) ಜೀವೋತ್ಪತ್ತಿಯ ಸಿದ್ಧಾಂತಗಳು : (ನೋಡಿ- ಜೀವದ-ಉಗಮ)

(ಜ) ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳು: ಮೂಲತಃ ಸಸ್ಯ ಮತ್ತು ಪ್ರಾಣಿಗಳು ಅನೇಕ ರೀತಿಯಲ್ಲಿ ಒಂದೇ ಆಗಿವೆ. ಆದ್ದರಿಂದಲೇ ಇವೆರಡು ಗುಂಪನ್ನೂ ಜೀವಿಗಳೆಂದು ಪರಿಗಣಿಸಲಾಗಿದೆ. ಸಸ್ಯ ಮತ್ತು ಪ್ರಾಣಿಗಳೆರಡರ ದೇಹವೂ ಅನೇಕ ಕೋಶಗಳಿಂದ ಕೂಡಿದೆ. ಕೋಶಗಳು ರಚನೆ ಹಗೂ ಕ್ರಿಯಾವಿಧಾನದಲ್ಲಿ ಸ್ವಯಂಪೂರ್ಣ ಘಟಕಗಳಂತಿವೆ. ಇವೆರಡರಲ್ಲೂ ನಡೆಯುವ ಅನೇಕ ಸಂವರ್ಧನ ಕ್ರಿಯೆಗಳು ಒಂದೇ ತೆರ. ಇಷ್ಟೆಲ್ಲ ಸಾಮ್ಯಗಳಿದ್ದರೂ ಸಸ್ಯ ಮತ್ತು ಪ್ರಾಣಿಗಳಲ್ಲಿ ಹಲವಾರು ಗಣನೀಯ ವ್ಯತ್ಯಾಸಗಳು ಇಲ್ಲದಿಲ್ಲ.
ಬಹುತೇಕ ಪ್ರಾಣಿಗಳು ಸಂಚರಿಸಿ, ಇತರ ಸಸ್ಯಗಳು ಉತ್ಪಾದಿಸಿದ ಅಥವಾ ಇತರ ಜೀವಿಗಳು ಬಿಟ್ಟ ಆಹಾರವನ್ನು ಸೇವಿಸುತ್ತವೆ. ಸಸ್ಯಗಳು ಹೆಚ್ಚಾಗಿ ಸ್ಥಾವರ ಜೀವಿಗಳು, ಮೇಲಾಗಿ ತಮ್ಮಲ್ಲಿರುವ ಹರಿತ್ತು (ಕ್ಲೋರೊಫಿಲ್) ಎಂಬ ವಿಶೇಷ ಘಟಕದಿಂದ ತಮ್ಮ ಆಹಾರವನ್ನು ತಾವೆ ತಯಾರಿಸಿಕೊಳ್ಳುವ ಅಪೂರ್ವ ಸಾಮಥ್ರ್ಯವನ್ನು ಇವು ಪಡೆದಿವೆ. ಪ್ರಾಣಿಗಳಲ್ಲಿ ನಶಿಸಿಹೋದ ಕೋಶಗಳು ಕಾಲಕಾಲಕ್ಕೆ ನವೀಕರಣಗೊಂಡರೂ ಪ್ರಾಣಿಗಳು ಒಂದು ನಿರ್ದಿಷ್ಟ ಗಾತ್ರದವರೆಗೆ ಮಾತ್ರ ಬೆಳೆಯುತ್ತವೆ. ಆದರೆ ಸಸ್ಯಗಳು ಅವ್ಯಾಹತವಾಗಿ ಬೆಳೆಯುತ್ತಲೇ ಇರುತ್ತವೆ. ಇದಕ್ಕೆ ಕಾರಣ, ಇವುಗಳಲ್ಲಿ ಕೆಲವು ಕೋಶಗಳು ಅಜೀವಾಂತವು ಚಟುವಟಿಕೆಯಿದಿದ್ದು ಬೆಳೆಯುತ್ತಲೇ ಇರುವುದು. ಅಂತೆಯೇ ಸಸ್ಯಗಳಲ್ಲಿ ಸೆಲ್ಯುಲೋಸಿನಿಂದಾದ ದೃಢವಾದ ಒಂದು ಕೋಶಭಿತ್ತಿ ಇರುವುದರಿಂದ ಕೋಶಕ್ಕೆ ರಕ್ಷಣೆಯಿಲ್ಲದೆ ಖಚಿತ ರೂಪವೂ ಒದಗುತ್ತದೆ. ಆದರೆ ಪ್ರಾಣಿಗಳಲ್ಲಿ ಈ ಬಗೆಯ ಕೋಶಭಿತ್ತಿಯಿಲ್ಲದ ಕಾರಣ, ಸ್ಥಿತಿಸ್ಥಾಪಕಶಕ್ತಿಯುಳ್ಳ ಕೋಶ ಪಟಲವೇ ಕೋಶದ ಆಕಾರ ಮತ್ತು ಗಾತ್ರ ಬದಲಾವಣೆಗೆ ಅನುಮಾಡಿಕೊಟ್ಟಿದೆ. ಸಸ್ಯಕೋಶಗಳಲ್ಲಿ ರಸದಿಂದ ತುಂಬಿರುವ ರಸದಾನಿಗಳಿವೆ. ಆದರೆ ಇವು ಪ್ರಾಣಿಗಳಲ್ಲಿ ಕಾಣುವುದಿಲ್ಲ. ಸಸ್ಯದಲ್ಲಿಲ್ಲದ ಸೆಂಟ್ರೋಸೋಮುಗಳು ಪ್ರಾಣಿಕೋಶದ ನ್ಯೂಕ್ಲಿಯಸಿನ ಬಳಿ ಇವೆ. ಹೀಗೆ, ಸಸ್ಯ ಮತ್ತು ಪ್ರಾಣಿಗಳಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಕಂಡಾಗ್ಯೂ, ಎರಡರ ಕೋಶಗಳಲ್ಲೂ ಜೀವದ್ರವ್ಯದ ಭೌತ ಹಾಗೂ ರಾಸಾಯನಿಕ ಲಕ್ಷಣಗಳಿರುವ ಸಾಮ್ಯವನ್ನು ಮರೆಯಲಾಗುವುದಿಲ್ಲ.

ಇಡೀ ಜೀವರಾಶಿಯನ್ನು ಸಸ್ಯ ಮತ್ತು ಪ್ರಾಣಿಗಳೆಂದು ಎರಡು ದೊಡ್ಡ ಗುಂಪುಗಳಾಗಿ ವಿಂಗಡಿಸುವುದು ಸುಲಭ ಸಾಧ್ಯವಿದ್ದರೂ ಏಕಕೋಶಿಗಳಾಗಿರುವ ಅನೇಕ ಜೀವಿಗಳನ್ನು ನಿರ್ದಿಷ್ಟ ರೀತಿಯಲ್ಲಿ ಈ ಗುಂಪುಗಳಿಗೆ ಸೇರಿಸಲು ಸಾಧ್ಯವಿಲ್ಲ. ಏಕೆಂದರೆ ಇವು ಸೂಕ್ಷ್ಮವಾಗಿರುವುವಲ್ಲದೆ, ಸಸ್ಯ ಮತ್ತು ಪ್ರಾಣಿಗಳೆರಡರ ಗುಣಲಕ್ಷಣಗಳನ್ನು ಪಡೆದಿವೆ. ಉದಾಹರಣೆ ವೈರಸುಗಳು.

5. ಜೀವಾಧ್ಯಯನ ಕ್ರಮ : ಈಗ ಬದುಕಿರುವ ಜೀವಿಗಳು ಹಾಗೂ ಯುಗಯುಗಾಂತರಗಳ ಹಿಂದೆ ಬಾಳಿ, ಅಳಿದುಹೋದ ಜೀವಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿದ ರೀತಿ, ಅವುಗಳ ನಿತ್ಯ ಜೀವನದ ಕ್ರಮ, ರಚನಾಯೋಜನೆ, ಹುಟ್ಟು ಮತ್ತು ಬೆಳೆವಣಿಗಗಳ ಕ್ರಮ, ಚಲನವಲನಗಳು, ಪರಸ್ಪರ ಬಾಂಧವ್ಯ ಹಾಗೂ ಜೀವಿಗಳಿಗೂ ಪರಿಸರಕ್ಕೂ ಇರುವ ನಿಕಟ ಸಂಬಂಧ-ಮೊದಲಾದ ದೃಷ್ಟಿಗಳಿಂದ ಜೀವಿಗಳನ್ನು ಪರಿಶೀಲಿಸುವುದು ಸೂಕ್ತ ಮಾರ್ಗ. ಒಂದು ಜೀವಿಯನ್ನು ಮತ್ತೊಂದರಿಂದ ಬೇರೆಯಾಗಿ ಗುರುತಿಸಲು ಅವುಗಳ ಹೊರ ರೂಪರಚನೆಗಳೇ ಅಡಿಗಲ್ಲು. ರೂಪರಚನೆಗಳ ಅಧ್ಯಯನಕ್ಕೆ ದೇಹರಚನಾಶಾಸ್ತ್ರ (ಮಾರ್ಫಾಲಜಿ) ಎಂದು ಹೆಸರು. ಅಂಗಗಳ ಒಳರಚನೆಯ ಅಧ್ಯಯನಕ್ಕೆ ಅಂಗರಚನಾಶಾಸ್ತ್ರ (ಅಟನಾಮಿ) ಎಂದು ಹೆಸರು. ನಿಷೇಚನವಾದ ಕ್ಷಣದಿಂದ ಅಂಡದಲ್ಲಿ ಕಾಲಕಾಲಕ್ಕೆ ಕಂಡುಬರುವ ಅವಸ್ಥೆಗಳ ಅಭ್ಯಾಸವೇ ಭ್ರೂಣಶಾಸ್ತ್ರ (ಎಂಬ್ರಿಯಾಲಜಿ) ಅನೇಕ ಶತಮಾನಗಳ ಹಿಂದೆ ಬದುಕ್ಕಿದ್ದು ಅನಚಿತರ ಅಳಿದುಹೋದ ಜೀವಿಗಳ ಅಧ್ಯಯನಕ್ಕೆ ಪ್ರಾಗ್ಜೀವಶಾಸ್ತ್ರ ಅಥವಾ ಲುಪ್ತಜೀವಶಾಸ್ತ್ರ (ಪೇಲಿಯಂಟಾಲಜಿ) ಎಂದು ಹೆಸರು. ಜೀವಿಗೂ ಪರಿಸರಕ್ಕೂ ಇರುವ ನಿಕಟಬಾಂಧವ್ಯದ ಅಭ್ಯಾಸವನ್ನು ಪರಿಸರಶಾಸ್ತ್ರ (ಈಕಾಲಜಿ) ಎಂದೂ ಜೀವಿಗಳ ಗುಣಲಕ್ಷಣಗಳು ಪೀಳಿಗೆಗಳಿಂದ ಸಾಗಿಬರುವ ವಿಧಾನದ ಅಧ್ಯಯನವನ್ನು ತಳಿವಿಜ್ಞಾನ (ಜೆನೆಟಿಕ್ಸ್) ಎಂದೂ ಕರೆಯುತ್ತಾರೆ. ಹೀಗೆ ವಿವಿಧ ಜೀವಿಗಳಿರುವ ಹೋಲಿಕೆ, ವ್ಯತ್ಯಾಸ ಮತ್ತು ವೈಶಿಷ್ಯಗಳನ್ನು ಅರಿಯಲು ಅವನ್ನು ಬೇರೆ ಬೇರೆ ದೃಷ್ಟಿಗಳಿಂದ ಅಭ್ಯಸಿಸುವ ಕ್ರಮ ಕ್ಯೂವೀಯೇನ ಕಾಲದಿಂದಲೂ ರೂಢಿಯಲ್ಲಿದೆ.

(ಚಿ) ಜೀವಿಗಳ ರೂಪ, ರಚನೆ ಮತ್ತು ಕ್ರಿಯಾ ವಿನ್ಯಾಸ : ಜೀವಿಗಳ ಬಾಹ್ಯ ಹಾಗೂ ಒಳರಚನೆಗಳ ಸ್ಥೂಲ ಲಕ್ಷಣಗಳು ಅನೇಕ ಶತಮಾನಗಳಿಂದ ಜೀವ ಸಶ್ತ್ರಾಜ್ಞರಿಗೆ ಪರಿಚಿತವಾಗಿವೆ. ಆದರೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳೇ ಮುಂತಾದ ಸುಧಾರಿತ ಉಪಕರಣಗಳು ಆಗಮಿಸಿದ ಬಳಿಕವೇ ಜೀವಿಗಳ ಸೂಕ್ಷ್ಮರಚನೆಯ ವಿವರಗಳು ಲಭಿಸಲು ಆರಂಭವಾದವು. ವಿಜ್ಞಾನ ಮುಂದುವರಿದಂತೆಲ್ಲ ಎಲ್ಲ ಜೀವಿಗಳ ಉತ್ಪತ್ತಿಗೂ ರಚನೆಗೂ ಕೋಶಗಳೇ ಮೂಲಾಧಾರವೆನ್ನುವುದಲ್ಲದೆ ಜೀವವಿಜ್ಞಾನದ ಪ್ರತಿ ಸಮಸ್ಯೆಗೂ ಪರಿಹಾರವನ್ನು ಕೋಶದಲ್ಲೇ ಕಾಣಬಹುದೆಂದು ಮನವರಿಕೆಯಾಗುತ್ತ ಬಂತು. ಕೋಶದಿಂದ ಕೋಶೋತ್ಪತ್ತಿಯಾಗಬೇಕೇ ವಿನಾ ಅನ್ಯಥಾ ಸಾಧ್ಯವಿಲ್ಲ. ಸರಳಜೀವಿಗಳಾದ ಪ್ರೋಟೊಜೊವಗಳೇ ಮುಂತಾದ ಸೂಕ್ಷ್ಮಜೀವಿಗಳು ಏಕಕೋಶಿಗಳು. ಬಹುಕೋಶಜೀವಿಗಳೂ ತಮ್ಮ ಜೀವನವನ್ನು ಏಕಕೋಶರೂಪದಲ್ಲೇ ಆರಂಭಿಸುತ್ತವೆ. ಕೋಶಗಳ ವಿಭಜನೆಯ ಫಲವಾಗಿ ಬಹುಕೋಶಿಗಳಲ್ಲಿ ಕೋಟ್ಯನುಕೋಟಿ ಕೋಶಗಳು ರೂಪುಗೊಳ್ಳುವುವಲ್ಲದೆ, ಸದ್ಯಕೋಶಗಳ ಒಕ್ಕೂಟದಿಂದ  ಊತಕಗಳೂ ಇವುಗಳ ಒಕ್ಕೂಟದಿಂದಾಗಿ ಅಂಗಗಳೂ ಮತ್ತು ಅಂಗವ್ಯವಸ್ಥೆಗಳೂ ರೂಪುಗೊಳ್ಳುತ್ತವೆ. ದೇಹದಲ್ಲಿರುವ  ಕೋಶಗಳು, ರಚನೆ, ಗಾತ್ರ ಮತ್ತು ಕಾರ್ಯಗಳಲ್ಲಿ ಹೆಚ್ಚು ವೈವಿಧ್ಯ ತೋರುವುದರಿಂದ ಬಹುಕೋಶಿಗಳಲ್ಲಿ ವಿವಿಧ ಬಗೆಯ ಊತಕಗಳನ್ನು ಗುರುತಿಸಬಹುದು.

ಗುಂಡಿಗೆ, ರಕ್ತನಾಳ, ಪುಪ್ಪಸ ಹಾಗೂ ದೇಹದ ಹೊರಮೈಯನ್ನು ಆವರಿಸಿ, ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಚಪ್ಪಟೆ ಕೋಶಗಳು ಅನುಲೇಪಕ ಊತಕವಾಗಿ ರೂಪಗೊಂಡಿವೆ. ಅಂಗಾಂಗಳನ್ನು ಸುತ್ತುಕಟ್ಟುವುದು, ಅವುಗಳಿಗೆ ಆಸರೆ ಕೊಡುವುದು, ವಿವಿಧಾಂಗಗಳನ್ನು ಬಂಧಿಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವ ಸಂಯೋಜಕ ಊತಕ ರಕ್ತ, ಅಸ್ಥಿ ಮತ್ತು ಮೃದ್ವಸ್ಥಿಗಳ ರೂಪದಲ್ಲಿರುತ್ತದೆ. ಕುಗ್ಗುವಿಕೆ ಮತ್ತು ಹಿಗ್ಗುವಿಕೆಗಳಂಥ ಕಾರ್ಯಗಳಿಗಾಗಿ ಮಾಂಸಖಂಡ ಊತಕವೂ ಪ್ರಚೋದಿತ ಸಂದೇಶಗಳನ್ನು ಸಾಗಿಸುವ ಕ್ರಿಯಾವಾಹಿನೀ ಮತ್ತು ಜ್ಞಾನವಾಹಿನೀ ತಂತುಗಳಿಂದಾದ ವಿಶಿಷ್ಟ ಬಗೆಯ ನರ ಊತಕವೂ ಪ್ರಾಣಿಗಳಲ್ಲಿರುವುದು ಸರ್ವೇಸಾಮಾನ್ಯ.
ಅಂತೆಯೇ ಸಸ್ಯಗಳಲ್ಲಿ ವರ್ಧನಸಾಮಥ್ಯವುಳ್ಳ ಊತಕ ಮತ್ತು ಶಾಶ್ವತ ಊತಕಗಳೆಂಬ ಎರಡು ಬಗೆಯ ಕೋಶಸಮೂಹಗಳನ್ನು ಗುರುತಿಸಬಹುದು. ವರ್ಧನಕೋಶಗಳು ತಮ್ಮ ವಿಭಜನಾಶಕ್ತಿಯಿಂದ ಹೊಸ ಕೋಶಗಳನ್ನು ಸತತವಾಗಿ ನಿರ್ಮಿಸುತ್ತಲೇ ಇರುತ್ತವೆ. ಇಂಥ ಊತಕಗಳು ಸಾಮಾನ್ಯವಾಗಿ ಕಾಂಡ ಹಾಗೂ ಬೇರಿನ ತುದಿಗಳಲ್ಲೂ ಮೊಗ್ಗುಗಳಲ್ಲೂ ಸ್ಥಿತವಾಗಿವೆ. ಶಾಶ್ವತ ಊತಕಗಳಲ್ಲಿ ವಿಭಜನೆಯಾಗದೆ ಇರುವ ಕೋಶಗಳೇ ಹೆಚ್ಚು. ಎಲೆ, ಹೂ ಮುಂತಾದ ಅಂಗಾಂಗಳ ಹೊರಮೈಯ ರಕ್ಷಣಾಕಾರ್ಯದಲ್ಲಿ ಪಾಲ್ಗೊಳ್ಳುವ ಎಪಿಡರ್ಮಿಸ್ ಕೋಶಗಳು ಕ್ಯೂಟಿನ್‍ನಿಂದ ಆವೃತವಾಗಿವೆ. ನೀರು ಮತ್ತು ಆಹಾರವನ್ನು ಸಂಗ್ರಹಿಸುವುದರಲ್ಲಿ ನೆರವಾಗುವ ಪರೆಂಕಿಮ ಊತಕ ಸಸ್ಯದ ಎಲ್ಲ ಅಂಗಗಳಲ್ಲಿಯೂ ಉಂಟು. ವಿವಿಧ ಭಾಗಗಳಿಗೆ ಆಧಾರಸ್ತಂಭದಂತಿರುವ ಸ್ಲ್ಕೀರೆಂಕಿಮದಲ್ಲಿರುವ ಕೋಶಗಳಲ್ಲಿ ಸೆಲ್ಯುಲೋಸ್ ಮತ್ತು ಲಿಗ್ನಿನ್ ಎಂಬ ವಿಶಿಷ್ಟ ವಸ್ತುಗಳಿವೆ. ನಾರಿನಂತಿರುವ ಈ ಕೋಶಗಳಿಗೆ ಸಂಸಕ್ತಿ ಸಾಮಥ್ರ್ಯ ನಂಬಿಕೆಗಳುಂಟು. ಖನಿಜ ಮತ್ತು ಲವಣಗಳಿಂದ ಕೂಡಿದ ನೀರನ್ನು ಒಯ್ಯುವ ಕ್ಸೈಲಮ್ ಮತ್ತು ಆಹಾರ ಸಾಗಣೆಯಲ್ಲಿ ನೆರವಾಗುವ ಪ್ಲೋಯಮ್‍ಗಳು ಸಸ್ಯಗಳಲ್ಲಿ ಕಂಡುಬರುವ ಮತ್ತೊಂದು ಬಗೆಯ ಊತಕದ ಅಂದರೆ ವಾಹಕ ಊತಕದ-ಉದಾಹರಣೆಗಳು.

(b) ಭ್ರೂಣಶಾಸ್ತ್ರಾಧ್ಯಯನ : ಅಂಡದೊಳಗಿರುವ ಜೀವಿ ಬೆಳೆದು ಮರಿಯಾಗಿ ಹೊರಬುರುವ ವಿವಿಧ ಹಂತಗಳೇ ವಿವರವೇ ಭ್ರೂಣಶಾಸ್ತ್ರ. ಜೀವಿಯ ಬೆಳೆವಣಿಗೆಯನ್ನು ಕೆಲವು ತತ್ತ್ವಾಧಾರಗಳ ಮೇಲೆ ಅರಿಯಲು ಪ್ರಾರಂಭಿಸಿದ ಪೂರ್ವೋದ್ಭವ ಸಿದ್ದಾಂತ (ಫ್ರೀಫಾರ್ಮೇಷನ್ ತಿಯರಿ) ಮತ್ತು ಜೀವಾಂಕುರ ಸಿದ್ಧಾಂತಗಳು (ಎಪಿಜೆನೆಟಿಕ್ ತಿಯರಿ) ಅತಿ ಮುಖ್ಯವಾದವು. ಪಿತೃವನ್ನು ಹೋಲುವ ಸೂಕ್ಷ್ಮಾಕೃತಿ ಅಂಡದಲ್ಲಿರುತ್ತದೆಂದೂ ಶುಕ್ರಾಣು ಬೆಳೆಯುವ ಜೀವಿಗೆ ಕೇವಲ ಆಹಾರ ಒದಗಿಸಲು ನೆರವು ನೀಡುವುದೆಂದೂ ಸ್ವಾಮರ್‍ಡಾಮ್ ಮತ್ತು ಮಾಲ್ಫೀಗಿಯವರ ವಾದವರೆ, ಶುಕ್ರಾಣವೇ ಭವಿಷ್ಯಜೀವಿಯ ಸರ್ವಾಂಗ ಸ್ವರೂಪವಿರುವ ಸೂಕ್ಷ್ಮಾಕೃತಿಯ ಗೂಡೆಂದು ಇನ್ನು ಕೆಲವರು ವಾದಿಸಿರು. ಆದರೆ, ಈ ಎರಡು ಬಗೆಯ ಪೂರ್ವೋದ್ಭವ ಸಿದ್ಧಾಂತಗಳೂ ಆಧಾರರಹಿತವಾಗಿವೆ. ಅಂಡ ಶುಕ್ರಾಣುಗಳೆರಡೂ ಭ್ರೂಣೋತ್ಪತ್ತಿಗೆ ಮುಖ್ಯವೆಂಬುದು ಕಾಲಾನುಕ್ರಮದಲ್ಲಿ ಮನವರಿಕೆಯಾಯಿತು. ವುಲ್ಫ್‍ನ ಜೀವಾಂಕುರ ಸಿದ್ಧಾಂತದಂತೆ ಒಂದು ಗೊತ್ತಾದ ಪರಿಸರದಲ್ಲಿ ಹಂತಹಂತವಾಗಿ ಬದಲಾಗುತ್ತ ಹೋಗಿ ತನ್ನ ಅಂತಿಮಸ್ವರೂಪವನ್ನು ಮುಟ್ಟುತ್ತದೆ. ಆದ್ದರಿಂದ ಅಂಡದಲ್ಲಾಗಲೀ ಶುಕ್ರದಲ್ಲಾಗಲೀ ಜೀವಿಯ ಪೂರ್ಣಚಿತ್ರವಿರುವುದಿಲ್ಲವೆಂದು ಈತ ದೃಢಪಡಿಸಿದ. ಜೀವಿಗಳು ಅಮರವಲ್ಲದಿದ್ದರು ಪ್ರಜನನಾಂಗ ಅಮರವೆಂದು ಸಾರಿದ ವೈಸ್‍ಮ್ಯಾನನ ಸಿದ್ಧಾಂತದಿಂದಾಗಿ ಸಂತಾನಾಭಿವೃದ್ಧಿಯಲ್ಲಿ ಗಂಡು ಹೆಣ್ಣುಗಳ ಪಾತ್ರದ ಪ್ರಮುಖತೆಯ ಅರಿವಾಯಿತು.

ಮೇಲ್ದರ್ಜೆಯ ಜೀವಿಗಳಲ್ಲಿ ಲಿಂಗಭೇದವಿರುವುದರಿಂದ ಗಂಡು ಹೆಣ್ಣುಗಳೆರಡೂ ಅನುಕ್ರಮವಾಗಿ ಶುಕ್ರಾಣು ಮತ್ತು ಅಂಡಗಳನ್ನು ಉತ್ಪತ್ತಿಮಾಡುತ್ತವೆ. ಭಿನ್ನ ರೀತಿಯ ಈ ಕೋಶಗಳ ಮಿಲನದಿಂದಾಗಿ ಯುಗ್ಮ ಉತ್ಪತ್ತಿಯಾಗುವುದು. ಭಿನ್ನ ರೀತಿಯ ಈ ಕೋಶಗಳ ಮಿಲನದಿಂದಾಗಿ ಯುಗ್ಮ ಉತ್ಪತ್ತಿಯಾಗುವುದು. ಹೀಗೆ ಗರ್ಭಧರಿಸಿದ ಅಂಡ ಖಂಡೀಭವನವಾಗಿ (ಸೆಗ್ಮೆಂಟೇಷನ್) ಅನೇಕ ಕೋಶಗಳಿಂದ ಕೂಡಿದ ಚಂಡಿನಂತಾಗುತ್ತದೆ. ಕ್ರಮೇಣ ಇದರ ಕೇಂದ್ರಭಾಗದಲ್ಲಿ ಉದ್ಭವಿಸುವ ದ್ರವದಿಂದಾಗಿ ಬೆಳೆವಣಿಗೆ ಬ್ಲಾಸ್ಟುಲ ಘಟ್ಟವನ್ನು ಮುಟ್ಟುತ್ತದೆ. ಈ ಹಂತದಲ್ಲಿ ಕಾಣುವ ವಿವಿಧ ಕೋಶಗಳು ಪ್ರಬುದ್ಧಜೀವಿಯಲ್ಲಿ ಬೇರೆಬೇರೆ ಅಂಗಗಳಾಗಿ ರೂಪುಗೊಳ್ಳುತ್ತವೆ. ಈ ಬಗೆಯ ಕೋಶವಂಶಾವಳಿಯನ್ನು ಸಂಪೂರ್ಣವಾಗಿ ಅರಿಯಲು, ಅಂಡದಲ್ಲಿನ ವಿವಿಧ ವಲಯಗಳನ್ನು ಗುರುತಿಸಿಕೊಳ್ಳಬೇಕು. ವಿವಿಧ ವಲಯಗಳಲ್ಲಿರುವ ರಾಸಾಯನಿಕ ವಸ್ತುಗಳನ್ನು ಅರ್ಥ ಮಾಡಿಕೊಳ್ಳಬೇಕು ; ಬ್ಲಾಸ್ಟುಲ ಮತ್ತು ಗ್ಯಾಸ್ಟ್ರುಲ ಹಂತಗಳಲ್ಲಿ ವಿವಿಧ ವಲಯಗಳಿಂದ ಮೂಡಿ ಬಂದಿರುವ ಕೋಶಗಳು ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಈ ರೀತಿ ನಿರ್ದಿಷ್ಟ ಸ್ಥಳಗಳ ಗುರುತಿನಿಂದಾಗಿ ಆ ಸ್ಥಳಗಳಲ್ಲಿರುವ ಕೋಶಗಳು ಮುಂದೆ ಯಾವ ಊತಕವನ್ನು ಅಥವಾ ಅಂಗವನ್ನು ಕೊಡುತ್ತವೆ ಎಂಬುದನ್ನು ಪ್ರಯೋಗಗಳ ಮೂಲಕ ಅರಿಯುತ್ತ ಈ ಕೋಶಸಂತತಿಯನ್ನೇ ಹಿಂಬಾಲಿಸಿದರೆ ಅಂತಿಮವಾಗಿ ಅದು ಯಾವ ಅಂಗವಾಗಿ ರೂಪುಗೊಳ್ಳುತ್ತದೆ ಎಂಬುದನ್ನು ಗುರುತಿಸಬಹುದು.

ಅಂಡದಲ್ಲಿರುವ  ಪ್ರಾಣಿಧ್ರುವ ಹಾಗೂ ಕಾಯಧ್ರುವಗಳಲ್ಲಿ ನಡೆಯುವ ಜೈವಿಕ ಕ್ರಿಯೆಗಳಲ್ಲಿ ಬಹಳ ವ್ಯತ್ಯಾಸಗಳಿವೆ. ಇದನ್ನು ಚೈಲ್ಡ್ ಎಂಬಾತ ಅಕ್ಷೀಯ ಓಟ (ಆ್ಯಕ್ಸಿಯಲ್ ಗ್ರೇಡಿಯಂಟ್) ಎಂಬ ತತ್ತ್ವದ ಮೂಲಕ ಪ್ರತಿಪಾದಿಸಿದ. ಪ್ರಾಣಿಧ್ರುವದಲ್ಲಿ ಜೈವಿಕ ಕ್ರಿಯೆಗಳ ಪ್ರಮಾಣ ಹೆಚ್ಚು. ಇದರಿಂದಾಗಿ ಅಲ್ಲಿ ಕೋಶವಿಭಜನೆ ತೀವ್ರಗತಿಯಲ್ಲಿ ನಡೆಯುತ್ತದೆ. ಈ ವಲಯದಿಂದ ಕೆಳಗೆ ಬಂದಂತೆ ವಿಭಜನೆಯ ಗತಿ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಮೊಟ್ಟೆಯಲ್ಲಿ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಚಯಾಪಚಯೀ ಅಕ್ಷೀಯ ಓಟ ಇರುತ್ತದೆಂಬ ತೀರ್ಮಾನಕ್ಕೆ ಚೈಲ್ಡ್ ಬಂದ. ಅಕ್ಷೀಯ ಓಟದ ಸ್ಥಿತಿಗತಿಗಳು ಅಂಡದೊಳಗಿರುವ ಕೋಶರಸದ ವಿವಿಧ ರಾಸಾಯನಿಕ ವಸ್ತುಗಳಿಗೆ ಸಂಬಂಧಿಸಿವೆಯೆಂದು ಈತ ಸೂಚಿಸಿದ.
ಸಂತಾನಕ್ರಿಯೆ ಪ್ರೌಢಜೀವಿಗಳಿಗೆ ಮಾತ್ರ ಸೀಮಿತವಾಗಿಲ್ಲ ; ಕೆಲವು ಪ್ರಾಣಿಗಳಲ್ಲಿ (ಕೆಲವು ಮೀನು, ಕಪ್ಪೆಗಳು) ಶೈಶವಸ್ಥೆಯಲ್ಲೂ ಸಂತಾನಾಭಿವೃದ್ಧಿ ಪ್ರವೃತ್ತಿಯನ್ನು ಕಾಣಬಹುದು. ಇದನ್ನೆ ನೀಯಟೀನಿ ಎನ್ನುತ್ತಾರೆ. ಮತ್ತೆ ಕೆಲವು ಜೀವಿಗಳು ತಮ್ಮ ಜೀವನದ ಪ್ರಥಮ ಹಂತಗಳಲ್ಲಿ ಅಂಡಗಳನ್ನು ಉತ್ಪತ್ತಿಮಾಡಿ, ಕ್ರಮೇಣ ಶುಕ್ರೋತ್ಪತ್ತಿಯಲ್ಲಿ ತೊಡಗುತ್ತವೆ. ಜೀವಿ ಹುಟ್ಟ ಬೇಕಾದರೆ ಅಂಡ ಶುಕ್ರಾಣುವಿನಿಂದ ನಿಷೇಚಿತವಾಗಲೇಬೇಕೆಂಬ ನಿಯಮವೂ ಇಲ್ಲ. ಪಿತೃರಹಿತ ಸಂತಾನಕ್ರಿಯೆ (ಪಾರ್ತನೋಜೆನೆಸಿಸ್) ಇರುವ ಕೆಲವು ಕೀಟಗಳಲ್ಲಿ ಶುಕ್ರಾಣುವಿನ ಸಂಪರ್ಕವಿಲ್ಲದೆಯೇ ಅಂಡ ಪ್ರೌಢಕೀಟವಾಗಿ ಬೆಳೆಯುವ ನಿದರ್ಶನವುಂಟು. ಇಂಥ ಸಂತಾನವನ್ನು ಕೃತಕ ವಿಧಾನದಿಂದಲೂ ಪಡೆಯಬಹುದು. ಅಂಡವನ್ನು ಸೂಜಿಯಿಂದ ಚುಚ್ಚಿಯೋ ಶೀತ, ಶಾಖಗಳಿಗೆ ಒಡ್ಡಿಯೊ ಹೊಸ ಜೀವಿಯನ್ನು ಪಡೆಯಬಹುದು. ಕೆಲವು ಜೀವಿಗಳಲ್ಲಿ ನಿರ್ಲಿಂಗ ರೀತಿಯ ಸಂತಾನಕ್ರಿಯೆಯೇ ಪ್ರಧಾನವಾಗಿರುತ್ತದೆ. ಎರೆಹುಳು, ನಕ್ಷತ್ರಮೀನು ಮುಂತಾದವುಗಳಲ್ಲಿ ಕಾರಣಾಂತರದಿಂದ ದೇಹ ತುಂಡಾದರೆ, ಇವು ಕಳೆದುಹೋದ ಭಾಗವನ್ನು ಪುನರುತ್ಪಾದಿಸುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ, ಭ್ರೂಣಶಾಸ್ತ್ರ ಗರ್ಭಧರಿಸಿ(ಸ)ದ ಅಂಡದೊಳಗೆ ನಡೆಯುವ ನಾನಾ ಭೌತಿಕ ಹಾಗೂ ರಾಸಾಯನಿಕ ಕ್ರಿಯೆಗಳನ್ನು ಚಾಚೂ ತಪ್ಪದೆ ಪ್ರತಿ ಹಂತದಲ್ಲೂ ಅಭ್ಯಾಸಮಾಡಲು ಸಹಾಯಕವಾಗಿದೆ.

(ಛಿ) ತಳಿವಿಜ್ಞಾನ : ಜೀವಿಗಳಲ್ಲಿರುವ ಸಾದೃಶ್ಯ ಮತ್ತು ವೈದೃಶ್ಯಗಳನ್ನು ವಿವರಿಸುವುದಲ್ಲದೆ ಸರ್ವಗುಣಲಕ್ಷಣಗಳಿಗೂ ಮೂಲಾಧಾರಗಳಾದ ಜೀನ್‍ಗಳ ಕ್ರಿಯಾಶೀಲತೆ, ಸಂಪ್ರೇಷಣಾ ವಿಧಾನವನ್ನು ವೈಜ್ಞಾನಿಕ ರೀತಿ ನಿರೂಪಿಸುವ ಈ ಶಾಸ್ತ್ರಕ್ಕೆ ಅನುವಂಶೀಯತೆ ಎಂಬ ಹೆಸರೂ ಇದೆ. ಬಟಾಣಿ ಗಿಡಗಳ ಮೇಲೆ ತಳೀಕರಣ ಪ್ರಯೋಗಗಳನ್ನು ನಡೆಸಿ, ಕೂಡಿಟ್ಟ, ಅಂಕಿ ಅಂಶಗಳ ಮಥನದಿಂದಾಗಿ ಆಸ್ಟ್ರಿಯದ ಗ್ರಗೋರ್ ಯೋಹನ್ ಮೆಂಡಲ್ (1822-1884) ಇದಕ್ಕೆ ಅಸ್ತಿಭಾರ ಹಾಕಿದ. ವಿವಿಕ್ತ ಕಣಸ್ವರೂಪದ ಅನುವಂಶೀಯತೆಯನ್ನು ಸರ್ ಫ್ರಾನ್ಸಿಸ್ ಗಾಟನನ್ನು ಸೂಚಿಸಿದ್ದರು ಅನುವಂಶೀಯತೆಯ ಸತ್ಯಾಂಶವನ್ನು ಪ್ರಯೋಗಾಧಾರಿತವಾಗಿ ದೃಢೀಕರಿಸಿದವರಲ್ಲು ಮೆಂಡಲ್ ಮೊಟ್ಟ ಮೊದಲಿಗನಾಗಿ ತಳಿವಿಜ್ಞಾನದ ಪಿತಾಮಹನೆಂಬ ಹೆಸರು ಪಡೆದಿದ್ದಾನೆ. ತಳೀಕರಣ ಪ್ರಯೋಗಕ್ಕಾಗಿ ಬಟಾಣಿ ಗಿಡ ಸೂಕ್ತವಾಗಿದೆಯಾದ್ದರಿಂದ ಆತನ ಸಂಶೋಧನೆಯ ಯಶಸ್ಸಿಗೆ ಅನುವು ನೀಡಿತು. ಸ್ವಯಂ ಹಾಗೂ ಅನ್ಯಪರಾಗಾರ್ಪಣೆಗೆ ಹೇಳಿ ಮಾಡಿದಂತಿರುವ ಪುಷ್ಪರಚನೆ, ಮಿಶ್ರ ಹಾಗೂ ಶುದ್ಧ ಸಂತಾನಗಳೆರಡೂ ನೀಡುವ ಫಲ ಮತ್ತು ಎರಡು, ಮೂರು ತಂಗಳುಗಳಲ್ಲೇ ನಿರೀಕ್ಷಿಸಿದ ಫಲಿತಾಂಶವನ್ನು ನೋಡುವ ಅನುಕೂಲ, ಕಡಿಮೆ ವೆಚ್ಚ-ಇವು ಬಟಾಣಿ ಗಿಡವನ್ನು ತಳಿವಿಜ್ಞಾನದ ದೃಷ್ಟಿಯಿಂದ ಆದರ್ಶಜೀವಿಯನ್ನಾಗಿ ಮಾಡಿವೆ. ಮೆಂಡಲನ ತಾಂತ್ರಿಕ ಕುಶಲತೆ ಹಿರಿದು. ಎರಡು ಶುದ್ಧ ಸಂತಾನಗಳನ್ನು ಅಡ್ಡಹಾಯಿಸಿದ್ದರಿಂದ ಮೊದಲ ಪೀಳಿಗೆಯಲ್ಲಿ ಅದೃಶ್ಯವಾಗಿದ್ದ ಗುಣ ಎರಡನೆಯ ಪೀಳಿಗೆಯಲ್ಲಿ ಮರು ಕಾಣಿಸಿಕೊಳ್ಳುವುನ್ನು ಗಮನಿಸಿದ ಮೆಂಡಲ್ 1866ರಲ್ಲಿ ಬ್ರುನ್ ಪ್ರಕೃತಿವಿಜ್ಞಾನ ಸಂಘದ ವಾರ್ಷಿಕ ವರದಿಯಲ್ಲಿ ಪ್ರತ್ಯೇಕತೆಯ ನಿಯಮ ಮತ್ತು ಸ್ವತಂತ್ರ್ಯ ವಿಂಗಡಣೆಯ ನಿಯಮ ಎಂಬ ಎರಡು ನಿಯಮಗಳನ್ನು ನಿರೂಪಿಸಿದ. ಆದರೆ ಇವು ಆಗಿನ ವಿಜ್ಞಾನಿಗಳ ಗಮನಕ್ಕೆ 1900ರ ತನಕ ಬರಲಿಲ್ಲ. ಜೀವಕೋಶಗಳ ವಿಭಜನೆ, ವರ್ಣತಂತುಗಳ ವರ್ತನೆ, ಲಿಂಗಕೋಶಗಳ ಉತ್ಪತ್ತಿ, ಗರ್ಭಾಂಕುರತೆ ಮುಂತಾದ ವಿಷಯಗಳನ್ನರಿತ್ತಿದ್ದ ಹ್ಯೂಗೊಡೆವ್ರೀಸ್, ಕಾರ್ಲ್ ಕೊರೆನ್ಸ್ ಮತ್ತು ಷೆರ್ಮಾಕ್ ಎಂಬುವರು ಮೆಂಡಲ್ ನಿರೂಪಿಸಿದ್ದಂತೆ, ಏಕ, ದ್ವಿ ಮತ್ತು ತ್ರಿಗುಣ ಅಡ್ಡತಳಿಗಳ ಮೊದಲ ಪೀಳಿಗೆಯ ಸಂತಾನಗಳಲ್ಲಿ ವಿವಿಧ ಗುಣಗಳು ಅನುಕ್ರಮವಾಗಿ 3:1, 9:3:3:1 ಮತ್ತು 27:9: 9: 9:3 : 3:3:1 ರ ಅನುಪಾತದಲ್ಲಿ ಬೇರ್ಪಡುವುದನ್ನು ಪ್ರತ್ಯೇಕವಾಗಿ ಮನಗಂಡರು. ಆನಂತರ ಈ ಮೂರು ಜನರೂ ಮೆಂಡಲನ ನಿಯಮಗಳನ್ನು ಪತ್ತೆಹಚ್ಚಿ ಅದಕ್ಕೆ ಮಾನ್ಯತೆ ಸಿಕ್ಕುವಂತೆ ಮಾಡಿದರು. 

ಹೀಗೆ 1900ರಲ್ಲಿ ಮೆಂಡಲನ ತಳಿವಿಜ್ಞಾನದ ಮೂಲತತ್ತ್ವಗಳು ಮರುಪ್ರಕಟವಾದ ಮೇಲೆ ದೇಶವಿದೇಶಗಳಲ್ಲಿ ತಳೀಕರಣ ಪ್ರಯೋಗ ಚುರುಕುಗೊಂಡಿತು. 1902ರಲ್ಲಿ ಸಟನ್ನನು ಅನುವಂಶೀಯತೆಗೂ ಕ್ರೋಮೊಸೋಮುಗಳು ಕೋಶವಿಜನೆಯಲ್ಲಿ ವಿತರಣೆಯಾಗುವ ವಿಧಾನಕ್ಕೂ ಸಂಬಂಧವಿದೆಯೆಂದು ಕಂಡುಹೀಡಿದ ಆಗಸ್ಟ್ ವೈಸ್‍ಮ್ಯಾನ್, ತೀಯೊಡೋರ್ ಬೊವರಿ ಮತ್ತು ಎಡ್ಮಡ್ ಟಿ. ವಿಲ್ಸನರು ಅನುವಂಶೀಯತೆಯ ಕ್ರೋಮೊಸೋಮ್ ಸಿದ್ಧಾಂತವನ್ನು ಮುಂದಿಟ್ಟರು. 1905ರಲ್ಲಿ ಮೆಂಡಲೀಯ ಘಟಕಗಳಿಗೆ "ಜೀನ್" ಅಥವಾ "ವಂಶವಾಹಿ" ಎಂದು ವಿಲ್‍ಹೆಲ್ಮ್ ಯೊಹಾನ್‍ಸನ್ ಪುನರ್ನಾಮಕರಣ ಮಾಡಿದ. ಮೆಂಡಲನ ಸಿದ್ಧಾಂತಗಳು ಜನಪ್ರಿಯವಾದಂತೆ, ಥಾಮಸ್ ಹಂಟ್ ಮಾರ್ಗನ್ ಮತ್ತು ಅವನ ಅನುಯಾಯಿಗಳಾದ ಸ್ವರ್ಟವಾಂಟ್, ಮುಲ್ಲರ್, ಬ್ರಿಡ್ಜಸ್ ಮುಂತಾದವರು ಡ್ರೋಸಾಫಿಲ ಎಂಬ ಕೀಟದಲ್ಲಿ ತಳಿಮಿಶ್ರಣ ಪ್ರಯೋಗ ನಡೆಸಿ ನೂರಾರು ವ್ಯತ್ಯಯ ಲಕ್ಷಣಗಳನ್ನು ಗುರುತಿಸಿದ್ದಲ್ಲದೆ, ಜೀನ್‍ಗಳು ಸಂಲಗ್ನ (ಲಿಂಕೇಜ್) ಗುಂಪುಗಳಲ್ಲಿರುವುವೆಂದೂ ಈ ಕೀಟದಲ್ಲಿ ನಾಲ್ಕು ಸುಲಗ್ನ ಗುಂಪುಗಳಿವೆಯೆಂದೂ ತೋರಿಸಿಕೊಟ್ಟರು. 1910ರಲ್ಲಿ ಲಿಂಗಸಂಲಗ್ನತೆಯನ್ನೂ (ಸೆಕ್ಸ್ ಲಿಂಕೇಜ್) ಅಭ್ಯಸಿಸಿದರು. ಜೀನ್‍ಗಳು ಸರದಲ್ಲಿನ ಮಣಿಗಳಂತೆ ಜೋಡಣೆಗೊಂಡಿದ್ದರೂ ಕ್ರೋಮೊಸೋಮುಗಳಲ್ಲಿ ಆಗಾಗ್ಗೆ ಆಗುವ ಅಡ್ಡ ಆಯ್ಕೆ ಮತ್ತು ಪರಸ್ಪರ ವಿನಿಮಯಗಳಿಂದಾಗಿ ಜೀನ್‍ಗಳ ಮರುಜೋಡಣೆ, ಲೋಪ, ದ್ವಿಪ್ರತೀಕರಣ, ಉತ್ಕ್ರಮಣ ಮತ್ತು ಸ್ಥಾನಾಂತರಣವಾಗುವುವು.

ಡೆ ವ್ರೀಸನ ಒಂದು ಜೀನ್ ಒಂದು ಗುಣ-ಎಂಬ ಸಿದ್ಧಾಂತವೂ ಬೇಟ್ಸನ್ ಮತ್ತು ಪನೆಟ್ಟರ ಜೀನ್ ಉಪಾನುಪಸ್ಥಿತಿ ವಾದವೂ ಆನುವಂಶೀಯತೆಯ ಅರಿವಿಗಾಗಿ ಪ್ರತಿಪಾದಿತವಾದರು ಕಾಲಕ್ರಮೇಣ ತ್ಯಜಿಸಲ್ಪಟ್ಟವು. 1933 ರಲ್ಲಿ ಗೋವೆನ್ ಮತ್ತು ಗೇ ಎಂಬಿಬ್ಬರು ಡ್ರೋಸಾಫಿಲ ನೊಣದ ನಾಲ್ಕು ಜೊತೆ ಕ್ರೋಮೊಸೋಮುಗಳಲ್ಲಿ ಸುಮಾರು 1500 ಜೀನ್‍ಗಳಿರಬಹುದೆಂದು ಪ್ರತಿಯೊಂದು ಜೀನ್‍ನ ಸರಾಸರಿ ಗಾತ್ರ 1 x 10-18 ಛಿm ಎಂದೂ ಊಹಿಸಿದರು.
ಒಂದು ಜೀನ್-ಒಂದು ಕಿಣ್ವ. ಆನಂತರ ಒಂದು ಜೀನ್-ಒಂದು ಕಾರ್ಯ ಎಂಬ ವಾದಗಳನ್ನು ನಿರೂಪಿಸಿದ ಬೀಡ್ಲ್ ಮತ್ತು ಟ್ಯಾಟಮ್ ಎಂಬುವರು ನ್ಯೂರಾಸ್ಪೊರವೆಂಬ ಬೂಷ್ಟಿನಲ್ಲಿ ಜೀನ್‍ಗೂ ಕಿಣ್ವಕ್ಕೂ ಸಂಕೀರ್ಣ ರಾಸಾಯನಿಕ ಕ್ರಿಯೆಗೂ ಇರುವ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಿದರು. ಜೀನ್‍ನ ಜಟಿಲ ಸಮಸ್ಯೆಯನ್ನು ಬಿಡಿಸಲೆತ್ನಿಸಿದ ಡಾಬ್ಜಾನ್‍ಸ್ಕಿ, ಸ್ಥಾನ ಪ್ರಭಾವದ ದತ್ತಾಂಶ ಮತ್ತು ಕಣಾತ್ಮಕ ವಾದಗಳೆರಡೂ ಜೀನ್‍ನ ಕ್ರಿಯಾಶೀಲತೆಯ ಮೇಲ್ಮಟ್ಟದಲ್ಲಿ ಸಮನ್ವಯವಾಗುವುವೆಂದು ಅಭಿಪ್ರಾಯಪಟ್ಟರೆ, ಮಲ್ಲರನು ನಿಖರವಾದ ಎಲ್ಲೆಯಿಲ್ಲದ ವಿಶಾಲ ಕ್ರಿಯಾರಂಗವುಳ್ಳ, ಕಣವೇ ಜೀನ್ ಎಂದು ಸೂಚಿಸಿದ್ದಾನೆ. ಆದರೆ ರಿಚರ್ಡ್ ಗೋಲ್ಡ್‍ಷ್ಮಿಟ್ಟನ ಪ್ರಕಾರ ಜೀನ್ ಪ್ರತ್ಯೇಕ ಕಣವಾಗಿದೆ. ದೇಹದ ಎಲ್ಲ ಕೋಶಗಳಲ್ಲಿರುವ ಒಂದೇ ಬಗೆಯ ಜೀನ್ ಒಂದು ಗೊತ್ತಾದ ಕಾಲ ಮತ್ತು ಪ್ರದೇಶದಲ್ಲಿ ಒಂದು ನಿರ್ದಿಷ್ಟ ಕ್ರಿಯೆಯನ್ನು ಹೇಗೆ ನಿಯಂತ್ರಿಸುತ್ತದೆ ಎನ್ನುವುದನ್ನು ಜೇಕಬ್ ಮತ್ತು ಮೊನಡ್ ವಿಶ್ಲೇಷಿಸಿದ ಮೇಲೆ (1961) ಒಂದು ಜೀನ್ ಒಂದು ಕಿಣ್ವವೆಂಬ ವಾದ ಆಧುನಿಕ ದೃಷ್ಟಿಯಲ್ಲಿ ಒಂದು ರಾಚನಿಕ ಜೀನ್‍ನಿಂದ ಒಂದು ದೂತ ಆರ್‍ಎನ್‍ಎ ಒಂದು ಪಾಲಿ ಪೆಪ್ಟೈಡ್ ಎಂದಾಗಿದೆ.

ನ್ಯೂಮೋಕಾಕಸ್ ಬ್ಯಾಕ್ಟೀರಿಯಗಳಲ್ಲಿ ಗ್ರಿಫಿತ್ ನಡೆಸಿದ ಪ್ರಯೋಗಗಳಿಂದ (1928) ಪ್ರಭಾವಿತರಾದ ಆವೇರಿ, ಮೆಕ್ಲೌಡ್ ಮತ್ತು ಮೆಕಾರ್ಟಿಯವರು ಜೀನ್‍ಗಿರುವ ಸ್ವಯಂದ್ವಿಪ್ರತೀಕರಣ ಸಾಮಥ್ರ್ಯ ಮತ್ತು ವಿಶಿಷ್ಟಕಾರ್ಯ ನಿರ್ದೇಶನ ಸಾಮಥ್ರ್ಯವನ್ನು ಗುರುತಿಸಿದ್ದಲ್ಲದೆ ಜೀನ್ ಡೀಆಕ್ಸಿರೈಬೋನ್ಯೂಕ್ಲಿಯಿಕ್ ಆಮ್ಲದಿಂದ ರಚಿತವಾಗಿದೆಯೆಂದು ನಿಷ್ಕರ್ಷಿಸಿದರು. ಹರ್ಷೆ ಮತ್ತು ಚೇಸ್ ಎಂಬಿಬ್ಬರು ವೈರಸ್ ಮತ್ತು ಬ್ಯಾಕ್ಟೀರಿಯಗಳ ಮೇಲೆ ನಡೆಸಿದ (1952) ಸಂಶೋಧನೆಯಿಂದಾಗಿ ಜೀನ್ ಡಿಎನ್‍ಎಯಿಂದ ರಚಿತವಾಗಿದೆಯೆಂಬ ಭಾವನೆ ಸರಿಯೆಂದು ಕಂಡುಬಂತು.
(ಜ) ಜೀವಿಗಳಿಗಿರುವ ಅಂತರಸಂಬಂಧ : ಪ್ರತಿಯೊಂದು ಜೀವಿಯೂ ನಿರ್ದಿಷ್ಟವಾದ ಒಂದು ಪರಿಸರದಲ್ಲಿ ಜೀವಿಸುತ್ತದೆ. ಒಂದು ಪರಿಸರದಿಂದ ಮತ್ತೊಂದು ಪರಿಸರಕ್ಕೆ ಹೋದರೆ ಜೀವಿಯ ಬದುಕು ಕಷ್ಟವಾಗುತ್ತದೆ. ಅಂದರೆ ಜೀವಿಯ ಅಳಿವು-ಉಳಿವುಗಳ ಪರಿಸರವನ್ನು ಅವಲಂಬಿಸಿವೆ. ಪರಿಸರಕ್ಕೂ ಜೀವಿಗೂ ಇರುವ ಪರಸ್ಪರ ಸಂಬಂಧವನ್ನು ಅಭ್ಯಸಿಸುವ ಪರಿಸರಶಾಸ್ತ್ರದಿಂದ ಜೀವಿಗಳ ಅಂತರಸಂಬಂಧವನ್ನು ತಳಿಯಬಹುದು. 19ನೆಯ ಶತಮಾನದ ಆದಿಯಲ್ಲಿ ಹಂಬೋಲ್ಟ್ ಎಂಬಾತ ಸಸ್ಯಪರಿಸರಶಾಸ್ತ್ರಕ್ಕೂ ಮೋಬಿಯಸ್ ಎಂಬಾತ ಪ್ರಾಣಿಪರಿಸರಶಾಸ್ತ್ರಕ್ಕೂ ಅಸ್ತಿಭಾರ ಹಾಕಿದರು. ಮೂಲ ಚೈತನ್ಯ ಎಲ್ಲ ಬಗೆಯ ಜೀವಿಗಳಿಗೂ ಒಂದೇ. ಆದರೆ ಅದು ಅಭಿವ್ಯಕ್ತವಾಗುವ ಬಗೆ ಬೇರೆ ಬೇರೆ. ಇದರಲ್ಲಿ ಪರಿಸರದ ಪ್ರಭಾವ ಸಾಕಷ್ಟಿದೆ. ಆಹಾರಕ್ಕಾಗಿ, ವಸತಿಗಾಗಿ, ಸಂತಾನಕ್ಕಾಗಿ, ರಕ್ಷಣೆಗಾಗಿ ಜೀವಿಗಳ ನಡುವೆ ಸತತ ಸ್ಪರ್ಧೆಯಿರುತ್ತದೆ. ಒಂದು ಜೀವಿ ಒಂದು ನಿರ್ದಿಷ್ಟ ಸ್ಥಳದ ನಿವಾಸಿ. (ಇಲ್ಲಿ ನಿವಾಸಿ ಎಂಬ ಪದ ಆ ಜೀವಿ ಬದುಕಿರುವ ಪರಿಸರದ ಬಲಗಳಿಗೆ, ನಿಯಮಗಳಿಗೆ ಅನ್ವಯಿಸುತ್ತದೆ.). ಆದ್ದರಿಂದ ಪರಿಸರದಲ್ಲಾಗುವ ಉಷ್ಣತೆಯ ವ್ಯತ್ಯಾಸ, ನೀರಿನ ಲವಣಾಂಶದ ಏರಿಳಿತ, ಹವಾಗುಣದ ವೈಪರೀತ್ಯ, ಸಿಡಿಲು, ಮಳೆ, ಬೆಳಕು, ಭೂಕಂಪಗಳೇ ಮೊದಲಾದ ಭೌತ ಬದಲಾವಣೆಗಳು ಪರಿಸರದ ಸ್ವರೂಪವನ್ನೇ ಕೆಡಿಸುತ್ತವೆ. ಈ ಬದಲಾವಣೆಗನುಗುಣವಾಗಿ, ತಮ್ಮ ಜೀವನದ ಧಾಟಿಯನ್ನೇ ಬದಲಿಸಿ, ಹೊಂದಿ ಕೊಂಡರೆ ಮಾತ್ರ ಜೀವಿಗಳು ಉಳಿಯಬಲ್ಲವು.

ಒಂದು ಬಗೆಯ ಜೀವಿಯ ಬೆಳೆವಣಿಗೆ ಬಹುಮಟ್ಟಿಗೆ ಅದಕ್ಕೆ ದೊರೆಯುವ ಆಹಾರವನ್ನು ಅವಲಂಬಿಸಿದೆ. ಪ್ರತಿಯೊಂದು ಸಮಾಜದಲ್ಲೂ ಮಿಶ್ರ ಆಹಾರದ ಒಂದು ಜಾಲವುಂಟು. ಈ ಜಾಲ ಎಲ್ಲ ಜೀವರಾಶಿಗಳನ್ನೂ ಆವರಿಸಿದೆ. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಬಲ್ಲವು. ಹರಿತ್ತು ಇಲ್ಲದ ಗಿಡಗಳು ಮತ್ತು ಪ್ರಾಣಿಗಳು ತಮ್ಮ ಆಹಾರವನ್ನು ತಾವೆ ತಯಾರಿಸಬಲ್ಲವು. ಹರಿತ್ತು ಇಲ್ಲದ ಗಿಡಗಳು ಮತ್ತು ಪ್ರಾಣಿಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲಾರವು. ಇದರಿಂದ ಹಸಿರು ಸಸ್ಯಗಳನ್ನು ಉತ್ಪಾದಕಗಳೊಂದೂ ಮತ್ತು ಪ್ರಾಣಿಗಳನ್ನು ಬಳಕೆದಾರಗಳೆಂದೂ ಗಣಿಸಬಹುದು. ಬಳಕೆದಾರರುಗಳಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಬಳಕೆದಾರಗಳೆಂಬ ಮೂರು ಬಗೆಗಳುಂಟು. ಪ್ರಾಥಮಿಕ ಬಳಕೆದಾರಗಳಾದ ಇಲಿ, ಮೊಲ, ಜಿಂಕೆ ಮುಂತಾದವು ನೇರವಾಗಿ ಸಸ್ಯಗಳನ್ನು ತಿಂದು ಜೀವಿಸುತ್ತವೆ. ದ್ವಿತೀಯ ಬಳಕೆದಾರಗಳಾದ ಹಾವು, ಬೆಕ್ಕು, ಹುಲಿ ಮುಂತಾದವುಗಳು ಪ್ರಥಮ ಬಳಕೆದಾರರುಗಳನ್ನು ಅವಲಂಬಿಸಿವೆ. ತೃತೀಯ ಬಳಕೆದಾರಗಳು, ದ್ವಿತೀಯ ಬಳಕೆದಾರಗಳನ್ನು ತಿಂದು ಬದುಕುತ್ತವೆ. ಉದಾಹರಣೆಗೆ ರಣಹದ್ದು ಇತ್ಯಾದಿ, ಉತ್ಪಾದಕಗಳಾದ ಸಸ್ಯಗಳಿಲ್ಲದಿದ್ದರೆ ಪ್ರಾಥಮಿಕ ಬಳಕೆದಾರಗಳು ಬದುಕುವುದು ಸಾಧ್ಯವಿಲ್ಲ. ಇವೆರಡು ಬಗೆಗಳು ಇಲ್ಲದಿದ್ದಲ್ಲಿ ದ್ವಿತೀಯ ಬಳಕೆದಾರಗಳು ನಾಶವಾಗುತ್ತವೆ. ಇವು ಇಲ್ಲದಿದ್ದರೆ ತೃತೀಯ ಬಳಕೆದಾರಗಳು ನಿರ್ನಾಮವಾಗುತ್ತವೆ. ಆಹಾರ ಜಾಲದತ್ತ ನಮ್ಮ ಗಮನವನ್ನು ಮೊದಲು ಸೆಳೆದವ ಚಾಲ್ರ್ಸ್ ಡಾರ್ವಿನ್.
ಪ್ರತಿಯೊಂದು ಜೀವಸಮುದಾಯಕ್ಕೂ ಆಂತರಿಕ ಸಂಬಂಧಗಳ ಸಮಸ್ಯೆ ಇದೆ. ಯಾವುದೇ ನೈಸರ್ಗಿಕ ಜೀವಸಮುದಾಯದಲ್ಲಿ ಪ್ರಾಣಿಗಳೂ ಸಸ್ಯಗಳೂ ಸಮತೋಲನೆಯಲ್ಲಿರುತ್ತವೆ. ಯಾವುದೇ ಒಂದು ಗುಂಪಿನ ಹೆಚ್ಚಳವನ್ನು ನಿಸರ್ಗ ವಿರೋಧಿಸುತ್ತದೆ. ಈ ವಿರೋಧ ದಾಳಿಕೋರರ ಸಂಖ್ಯೆಯ ಬೆಳೆವಣಿಗೆಯಿಂದ, ಆಹಾರದ ಅಭಾವದಿಂದ ಅಥವಾ ರೋಗಗಳಿಂದ ಉಂಟಾಗಬಹುದು. ವಿವಿಧ ಜೀವಿಗಳ ಸಂಖ್ಯೆ ಪರಿಸರದ ಧಾರಣಶಕ್ತಿಯ ಅಂತರದಲ್ಲಿಯೇ ಇರುತ್ತದೆ. ಆದರೆ ಮಾನವನ ಕೈವಾಡದಿಂದ ಈ ನೈಸರ್ಗಿಕ ಸಮತೋಲ ಅನೇಕ ವೇಳೆ ತಲೆಕೆಳಗಾಗಿ, ಹೊಸ ಸಮತೋಲ ಉಂಟಾಗಬಹುದು. ಆಗ ಒಟ್ಟು ಜೀವಿ ಸಮುದಾಯ ವ್ಯವಸ್ಥೆಯೇ ಬುಡಮೇಲಾಗುವ ಸಂಬಂಧವುಂಟು. ಒಂದೇ ಬಗೆಯ ಜೀವಿಗಳಿಂದ ಹುಟ್ಟುವ ಎಲ್ಲ ಸಂತಾನಕ್ಕೂ ನಿಸರ್ಗದಲ್ಲಿ ಸ್ಥಳವಿಲ್ಲ. ಇದರಿಂದಾಗಿ ಒಂದೇ ಬಗೆಯ ಸೌಲಭ್ಯಕ್ಕಾಗಿ ಅವುಗಳಲ್ಲೇ ಸ್ಪರ್ಧೆ ಉಂಟಾಗುತ್ತದೆ. ಈ ಹೋರಾಟದಲ್ಲಿ ಯಶಸ್ವಿಗಳಾಗುವ ಜೀವಿಗಳು ಬೆಳೆದು ನಿಸರ್ಗ ನಿಯಮಿತ ಸಮತೋಲನದ ಸೀಮರೇಖೆಯನ್ನು ಮುಟ್ಟುತ್ತವೆ. ಒಮ್ಮೆ ತುಟ್ಟತುದಿಯನ್ನು ಮುಟಿದ ಜೀವಿಸಂಖ್ಯೆ ಅಲ್ಲಿಯೇ ಸ್ಥಿರವಾಗಿರಬೇಕೆಂಬ ನಿಯಮವಿಲ್ಲ. ವರ್ಷದಿಂದ ವರ್ಷಕ್ಕೆ ಋತುವಿನಿಂದ ಋತುವಿಗೆ ವ್ಯತ್ಯಾಸವಾಗಬಹುದು; ಕೆಲವೊಮ್ಮೆ ಸಂಪೂರ್ಣವಾಗಿ ನಾಶವಾಗುವುದೂ ಉಂಟು. ಸಾಮಾನ್ಯವಾಗಿ, ಜೀವಿಸಂಖ್ಯೆ ಒಂದು ನಿರ್ದಿಷ್ಟ ಚಕ್ರಗತಿಯಲ್ಲಿ ಏರಿಳಿಯುತ್ತದೆ. ಉದಾಹರಣೆಗೆ ಕೆನಡದ ಹಡ್ಸನ್ ಕೊಲ್ಲಿಯಲ್ಲಿ ಮೊಲಗಳ ಸಂಖ್ಯೆ 9 ಅಥವಾ 10 ವರ್ಷಗಳ ಅಂತರದಲ್ಲಿ ಸಮತೋಲದ ಪರಮಾವಧಿಯಲ್ಲಿ ಮುಟ್ಟುತ್ತವೆ. ಅಂತೆಯೇ ಮೊಲವನ್ನೇ ಅವಲಂಬಿಸಿರುವ ಕೆನಡದ ಕಿರುಬಗಳು 9.7 ವರ್ಷದಲ್ಲಿ ಈ ಸಮತೋಲ ಚಕ್ರವನ್ನು ಪೂರೈಸುವುದೂ ಗಮನಕ್ಕೆ ಬಂದಿವೆ. ಇದೇ ರೀತಿಯ ಚಕ್ರಗಳು ಇಲಿ, ಲೆಮಿಂಗ್, ತೋಳ ಮತ್ತು ಕೆಲವು ಪಕ್ಷಿಗಳಲ್ಲೂ ಕಂಡುಬಂದಿವೆ. ಈ ನೈಸರ್ಗಿಕ ಚಕ್ರವನ್ನು ಭಂಗಗೊಳಿಸುವುದರಿಂದ ಆಗುವ ದುಷ್ಪರಿಣಾಮವನ್ನು ಆರಿeóÉೂೀನದ ಕೈಬಾಟ್  ಹುಲ್ಲುಗಾವಲಿನಲ್ಲಿ ಈ ಶತಮಾನದ ಆದಿಯಲ್ಲಿ ವಾಸಿಸುತ್ತಿದ್ದ ಜಿಂಕೆಗಳಿಮದ ತಿಳಿಯಬಹುದು. ಜಿಂಕೆಯ ಸಂಖ್ಯೆ ಹೆಚ್ಚಿಸಲು 1905ರಲ್ಲಿ ಮಾಂಸಾಹಾರಿಗಳಾದ ತೋಳ, ಪ್ಯೂಮ ಮತ್ತು ಕಯೋಟ್‍ಗಳನ್ನು ಕೊಲ್ಲುವ ಯತ್ನ ತೀವ್ರಗತಿಯಲ್ಲಿ ನಡೆದದ್ದರಿಂದ ನೈಸರ್ಗಿಕ ಸಮತೋಲ ರೇಖೆಯನ್ನು ಮುಟ್ಟಿದ್ದ ಜಿಂಕೆಗಳ ಸಂಖ್ಯೆ 4,000 ರಿಂದ 40,000 ಕ್ಕೆ ಏರಿತ. 1920ರಲ್ಲಿ ಈ ಸಂಖ್ಯೆ 60,000 ಕ್ಕೆ ಏರಿದಾಗ ಕೆಲವು ಹಸಿವಿನಿಂದ 6% ರಷ್ಟು ಜಿಂಕೆಗಳು ಸತ್ತು ಹೋದವು. 1925ರಲ್ಲಿ 40,000 ಕ್ಕೆ ಇಳಿದ ಈ ಸಂಖ್ಯೆ 1939ರಲ್ಲಿ 10,000 ಕ್ಕೆ ಬಂದು ನಿಂತಿತು. ಆದರೆ ಅಷ್ಟರಲ್ಲಿ ಇಡೀ ಕಾಡೇ ನಿರ್ನಾಮವಾಗಿತ್ತು.

ಒಂದು ಪ್ರದೇಶಕ್ಕೆ ಹೊಸ ಜೀವಜಾತಿಯನ್ನು ಸೇರಿಸುವುದು, ಕೆಲವು ಜೀವಿಗಳನ್ನು ಅಲ್ಲಿಂದ ತೆಗೆಯುವಷ್ಟೇ ಕೆಟ್ಟ ಪರಿಣಾಮ ಬೀರುತ್ತದೆ. 1800ರ ಸುಮಾರಿನಲ್ಲಿ ಬೇಟೆಯ ಷೋಕಿಗಾಗಿ ಕೇವಲ ಐದು ಮೊಲಗಳನ್ನು ಆಸ್ಟ್ರೇಲಿಯಕ್ಕೆ ಕೊಂಡೊಯ್ಯಲಾಯಿತು. ಅದರೆ ಅಲ್ಲಿ ಇವಕ್ಕೆ ಯಾವ ಶತ್ರುಭಯವೂ ಇಲ್ಲದಿದ್ದುದರಿಂದ ಇವು ಅಡೆತಡೆಯಿಲ್ಲದೆ ಅತಿವೇಗವಾಗಿ ವೃದ್ಧಿಗೊಂಡು ದೇಶವನ್ನೆಲ್ಲ ಆಕ್ರಮಿಸಿದುವು. 1820ರ ವೇಳೆಗೆ ದೇಶದ ಸಸ್ಯಸಂಪತ್ತನ್ನೆಲ್ಲ ಇವು ನಾಶಮಾಡಿದ್ದಲ್ಲದೆ, ಅಲ್ಲಿದ್ದ ಕುರಿಗಳಿಗೆ ಕಂಟಕಪ್ರಾಯವಾದುವು. ಇದೇ ರೀತಿ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಕೊಂಡೊಯ್ಯಲಾದ ಗುಬ್ಬಚ್ಚಿ, ಯೂರೋಪಿಗೆ ತರಲಾದ ಜಿಪ್ಸಿ ಪತಂಗ ಮುಂತಾದ ಜೀವಿಗಳು ಆದಿಯಲ್ಲಿ ಪಿಡುಗಾಗಿ ಪರಿಣಮಿಸಿ, ಈಗ ಸಮತೋಲನವನ್ನು ಪಡೆದಿವೆ. ಆದ್ದರಿಂದ, ಪರಿಸರದ ನೈಸರ್ಗಿಕ ಸೂತ್ರಗಳ ಬೆಳಕಿನಲ್ಲಿ ನೆಲ, ಜಲ ಮತುತ ಕಡನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದನ್ನುಕಲಿತರೆ, ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಬಹುದಲ್ಲದೆ ಮುಂಬರುವ ಪೀಳಿಗೆಯ ಸುಖಮಯ ಜೀವನಕ್ಕೆ ಅವಕಾಶಮಾಡಿಕೊಡಬಹುದು.

(e) ಜೀವಿಗಳ ವರ್ಗಿಕರಣ : ಜೀವಿಗಳನ್ನು ಪ್ರಥಮ ಬಾರಿಗೆ ಮೂರು ಗುಂಪುಗಳಾಗಿ ವರ್ಗೀಕರಿಸಿದ ಕೀರ್ತಿ ಅರಿಸ್ಟಾಟಲನದು. ಸ್ಥಾವರವಾದವನ್ನು ಸಸ್ಯಗಳೆಂದೂ, ಚಲಿಸುವುವನ್ನು ಪ್ರಾಣಿಗಳೆಂದೂ, ಮಾತಾಡುವ ಜೀವಿಗಳನ್ನು ಮನುಷ್ಯರೆಂದೂ ವಿಭಾಗಿಸಿದ್ದಲ್ಲದೆ, ಪ್ರಾಣಿಗಳನ್ನು ರಕ್ತರಹಿತವಾದವು ಮತ್ತು ರಕ್ತವುಳ್ಳವು ಎಂಬ ಎರಡು ಉಪವರ್ಗಗಳಾಗಿ ವಿಂಗಡಿಸಿದ. ಆದರೆ ಈ ಬಗೆಯ ವರ್ಗೀಕರಣದಿಂದ ಉದಿಸುವ ತಪ್ಪುಕಲ್ಪನೆಯನ್ನರಿತ ಲಿನಿಯಸ್ ದ್ವಿನಾಮ ನಾಮಕರಣ ಪದ್ಧತಿಯನ್ನು ಜಾರಿಗೆ ತಂದ. ಇದರ ಪ್ರಕಾರ ವೈಜ್ಞಾನಿಕ ರೀತ್ಯ ಪ್ರತಿಯೊಂದು ಜೀವಿಗೆ ಅದರ ಜಾತಿ ಮತ್ತು ಪ್ರಭೇದಗಳೆರಡನ್ನೂ ನಿರ್ದೇಶಿಸುವ  ಹೆಸರು ಸೂಚಿಸುವುದು ರೂಢಿಯಾಯಿತು. 1898ರಲ್ಲಿ ಸಮಾವೇಶಗೊಂಡ ಜೀವವಿಜ್ಞಾನಿಗಳ ಸಭೆಯಲ್ಲಿ ಲಿನಿಯಸ್‍ನ ಪದ್ಧತಿಯನ್ನು ತಳಹದಿಯಾಗಿಟ್ಟುಕೊಂಡು ಇನ್ನಷ್ಟು ವಿಶದವಾದ ಒಂದು ಕ್ರಮವನ್ನು ಅನುಸರಿಸಲಾಯಿತು. ಜೀವಿಗಳಲ್ಲಿ ಹೊರರೂಪ ಅಂಗರಚನಾವಿನ್ಯಾಸ ಇತ್ಯಾದಿಗಳಲ್ಲಿ ಒಂದಕ್ಕೊಂದು ಹೋಲುವ ಮತ್ತು ಗುಣವಿಶೇಷಗಳು ಅನುವಂಶೀಯವಾಗಿ ಪೀಳಿಗೆಗಳಲ್ಲಿ ಹರಿದು ತಮ್ಮ ವ್ಯಕ್ತಿತ್ವನ್ನು ಉಳಿಸಿಕೊಳ್ಳಬಲ್ಲ ಜೀವಿಗಳೆಲ್ಲವನ್ನೂ ಪ್ರಭೇದಗಳೆಂದೂ ಒಂದಕ್ಕೊಂದು ಹೆಚ್ಚು ಹೋಲುವ ಪ್ರಭೇದಗಳನ್ನು ಒಟ್ಟುಗೂಡಿಸಿ ಜಾತಿಗಳೆಂದೂ ಸಾಮಾನ್ಯ ಲಕ್ಷಣಗಳಲ್ಲಿ ಹೆಚ್ಚು ಸಾಮ್ಯವಿರುವ ಹಲವು ಜಾತಿಗಳ ಗುಂಪಿಗೆ ಕುಟುಂಬಗಳೆಂದೂ ಹೆಸರು ಕೊಡಲಾಗಿದೆ. ಅನೇಕ ಕುಟುಂಬಗಳ ಗುಂಪಿಗೆ ಉಪವರ್ಗವೆಂದು ಉಪವರ್ಗಗಳ ಒಕ್ಕೂಟಕ್ಕೆ ವರ್ಗವೆಂದೂ ವರ್ಗಗಳ ಸಮೂಹಕ್ಕೆ ವಂಶವೆಂದೂ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ, ಪ್ರತಿಯೊಂದು ವರ್ಗ, ಉಪವರ್ಗವನ್ನೂ ಅನೇಕ ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಈ ವಿಧಾನದಿಂದ ಸುಮಾರು 10 ಲಕ್ಷಕ್ಕೂ ಮಿಗಿಲಾದ ಪ್ರಾಣಿಗಳನ್ನೂ 3 ಲಕ್ಷಕ್ಕೂ ಹೆಚ್ಚಾದ ಸಸ್ಯಗಳನ್ನೂ ಗುರುತಿಸಲಾಗಿದೆ. ಆದರೂ ವಿಶ್ವದಾದ್ಯಂತ ನಡೆಯುತ್ತಿರುವ ಸಂಶೋಧನೆಯಿಂದಾಗಿ ಜೀವಿಗಳ ಬಗೆಗೆ ಜ್ಞಾನ ದೀನೇ ದಿನೇ ಬೆಳೆಯುತ್ತಿದೆ. ಮಾನವನ ಅನ್ವೇಷಣೆಗೆ ನಿಲುಕದಂಥ ಪರಿಸರದಲ್ಲಿ ಇನ್ನೂ ಅನೇಕ ಜೀವಿಗಳು ಇರಬಹುದು. ಪಕ್ಷಿಗಳ ವರ್ಗೀಕರಣ ಪೂರ್ತಿಯಾಗಿದ್ದರು 1936ರವರೆಗೆ ಆಫ್ರಿಕದ ಆಫ್ರೊಪ್ಯಾವೊ ಕೋಂಜನ್ಸಿಸ್ ಎಂಬ ಹಕ್ಕಿಯೆ ಪತ್ತೆಯಾಗಿರಲಿಲ್ಲ. ಅಂತೆಯೇ ಇತ್ತೀಚೆಗೆ 1953ರಲ್ಲಿ ಸ್ಯಾಂಡರ್ ಎಂಬಾತ ಕಡಲವಾಸಿ ಕಠಿಣ ಚರ್ಮಗಳ ಒಂದು ಗುಂಪನ್ನೇ ಗುರುತಿಸಿದ. ದಕ್ಷಿಣ ಆಫ್ರಿಕದಲ್ಲಿ ದೊರಕಿದ ಲ್ಯಾಟಿಮೇರಿಯ ಜಾಲುಮ್ನಯೀ ಎಂಬ ಜೀವಿ 20ನೆಯ ಶತಮಾನದಲ್ಲಿ ಪತ್ತೆಯಾದ ಜೀವಿಗಳಲ್ಲೆಲ್ಲ ಪ್ರಮುಖವಾದದ್ದು. ಕೊಡ್ಲೊವಸ್ಕಿ ಗುರುತಿಸಿದ ಗ್ರಾಪ್ಟೊಲೈಟ್ ಫಾಸಿಲ್ ಕೂಡ ಇತ್ತೀಚಿನ ಕೊಡುಗೆ.

(ಜಿ) ವಿಕಾಸದ ದಿಗ್ದರ್ಶನ : ಮೊಗ್ಗು ಅರಳಿ, ಕ್ರಮೇಣ ಎಲೆ, ಕಾಂಡ, ಹೂ, ಕಾಯಿ, ಹಣ್ಣು ಮೊದಲಾದವು ರೂಪುಗೊಳ್ಳುವಂತೆ ಜೀವಿಗಳು ಅತ್ಯಂತ ಸಾವಾಕಾಶವಾಗಿ ರಚನೆಯಲ್ಲಿ ಕಾಲಕ್ರಮೇಣ ಬದಲಾವಣೆಗೊಳಗಾಗಿ ಇಂದಿನ ಜೀವರೂಪಗಳು ಕಾಣಿಸಿಕೊಂಡಿವೆಯೆಂಬ ಅಭಿಪ್ರಾಯವನ್ನು ವಿಜ್ಞಾನಿಗಳು ತಳೆದಿದ್ದಾರೆ. ಈಗಿರುವ ಜೀವಿಗಳೆಲ್ಲವೂ ಒಂದೇ ಬುಡಕಟ್ಟಿನಿಂದ ಉದ್ಭವಿಸಿ. ಪರಿಸರದ ಸ್ಥಿತಿಗತಿಗೆ ಅನುಗುಣವಾಗಿ ಪರಿವರ್ತನೆಯಾದ ರೂಪಗಳು ; ಎಲ್ಲ ಸಸ್ಯಗಳೂ ಪ್ರಾಣಿಗಳೂ ಆದಿಯಲ್ಲಿ ಒಂದೇ ಜೀವದಿಂದ ಕ್ರಮೇಣ ಹುಟ್ಟಿ, ಬೆಳೆದ ಎರಡು ಕವಲುಗಳು-ಇದು ವಿಕಾಸವಾದದ ತಿರುಳು, ಯುಗ ಯುಗಾಂತರಗಳ ಹಿಂದೆ, ಭೂಮಿಯ ಇತಿಹಾಸದ ಒಂದಾನೊಂದು ಕಾಲದಲ್ಲಿ, ಯಾವುದೋ ಒಂದು ಪ್ರಮಾಣದ ಉಷ್ಣತೆ, ಅನಿಲಗಳ ಒತ್ತಡ, ಲವಣಗಳ ಸಾಂದ್ರತೆಗಳಿಂದಾಗಿ ಮೊಟ್ಟಮೊದಲಿಗೆ ಅನುಗಾತ್ರದಲ್ಲಿ ಜೀವರಸ ಉತ್ಪತ್ತಿಯಾಯಿತೆಂಬ ನಂಬಿಕೆ ಇದೆ. ಇದು ಸಸ್ಯವೇ ಅಥವಾ ಪ್ರಾಣಿಯೇ ಎಂದು ಹೇಳಲು ಸಾಧ್ಯವಿಲ್ಲದ ಅವ್ಯಕ್ತರೂಪದಲ್ಲಿತ್ತು. ಜೀವರಸ ಜೀವದ ಎಲ್ಲ ಪ್ರಮುಖ ಗುಣಗಳನ್ನು ತೋರಿದಾಗ ಪ್ರಪ್ರಥಮ ಜೀವಿ ರೂಪುಗೊಂಡಿತು. ಕಾಲಗತಿಸಿದಂತೆ, ಈ ಆದಿಜೀವಿ ಸಸ್ಯವಾಗಿ, ಆನಂತರ ಪ್ರಾಣಿಯಾಗಿ ವಿಕಸವಾಯಿತೆಂಬ ಊಹೆಯಿದೆ. ಕೋಶಗಳು ರೂಪುಗೊಂಡ ಬಳಿಕ ಏಕಕೋಶ ಜೀವಿಗಳೂ ಇವುಗಳಿಂದ ಬಹುಕೋಶ ರೂಪಗೊಂಡ ಬಳಿಕ ಏಕಕೋಶ ಜೀವಿಗಳೂ ಇವುಗಳಿಂದ ಬಹುಕೋಶ ಜೀವಿಗಳು ಹುಟ್ಟಿ, ಕೋಟ್ಯಂತರ ವರ್ಷಗಳ ಕಾಲ ಬಾಳಿ, ಬದುಕಿ ಪರಿವರ್ತನೆಯಾದುದರ ಫಲವಾಗಿ ಇಂದಿನ ಜೀವಿರೂಪಗಳು ಅಸ್ತಿತ್ವಕ್ಕೆ ಬಂದಿವೆ. ಅಂದರೆ, ಏಕಕೋಶಿಯಾದ ಅಮೀಬದ ಅಂತಸ್ತಿನಿಂದ ಆರಂಭವಾಗಿ, ಅನೇಕ ಘಟ್ಟಗಳನ್ನು ಹತ್ತಿ, ಬಹುಕೋಶಿಗಳಾಗಿ, ಎಲುಬುರಹಿತ ಹಂತದಿಂದ ಎಲುಬಿರುವ ಸ್ಥಿತಿಗೆ ಬಂದು ಜಲಚರಗಳ ಅಂತಸ್ತಿನಿಂದ ಭೂಚರಗಳಾಗುವ ಪ್ರಯತ್ನದಲ್ಲಿ ಜನ ಗಳಿಸಿ ಮತ್ಸ್ಯಗಳಿಂದ ದ್ವಿಚರಿಗಳೂ ದ್ವಿಚರಿಗಳಿಂದ ಸರೀಸೃಪಗಳೂ ಅನಂತರ ಇವುಗಳಿಂದ ಪಕ್ಷಿಗಳೂ ಸಸ್ತನಿಗಳೂ ಉದ್ಭವಿಸಿ ಅನೇಕ ಹಂತಗಳ ಅನಂತರ ಮನುಷ್ಯನ ಅಂತಸ್ತನ್ನು ಮುಟ್ಟಿದೆ. ಈ ಪರಿವರ್ತನೆ ಅತ್ಯಂತ ಸಾವಕಾಶವಾಗಿ ಆಗುವುದರಿಂದ ಕಣ್ಣಿಗೆ ಗೋಚರಿಸುವಷ್ಟು ಬದಲಾವಣೆಯಾಗಬೇಕಾದರೆ ಲಕ್ಷಾಂತರ ವರ್ಷಗಳು ಹಿಡಿದಿರಬಹುದು. ಜೀವಿಗಳ ರೂಪರಚನೆ, ಭ್ರೂಣದ ಬೆಳೆವಣಿಗೆಯ ಇತಿಹಾಸ, ಲುಪ್ತ ಜೀವಿಶಾಸ್ತ್ರ, ಜೀವರಸಾಯನ ಕ್ರಿಯೆಗಳ ತುಲನಾಧ್ಯಯನ ಮತ್ತು ಜೀವಿಗಳಿಗೂ ಅನುವಂಶೀಯತೆಗೂ ಇರುವ ನಿಕಟಬಾಂಧವ್ಯಗಳ ಅಭ್ಯಾಸದಿಂದ ಜೀವವಿಕಾಸದ ವಿಧಾನ ಸ್ಪಷ್ಟವಾಗುವುದು.

ಮೇಲ್ನೋಟಕ್ಕೆ ಹೋಲಿಕೆ ಕಾಣದಿದ್ದರು ಕಶೇರುಕಗಳ ಚಲನಾಂಗಗಳ ಮತ್ತು ಕೀಟಗಳ ವದನಾಂಗಗಳ ರಚನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇವುಗಳ ನಡುವಣ ಯೋಜನಾಸಾದೃಶ್ಯ ವ್ಯಕ್ತವಾಗುವುದು. ಅವಶಿಷ್ಟ ಅವಯವಗಳ (ವೆಸ್ಟಿಜಿಯಲ್ ಆರ್ಗನ್ಸ್) ಅಧ್ಯಯನದಿಂದಲೂ ಜೀವವಿಕಾಸದ ಅರಿವು ಮೂಡುತ್ತದೆ. ಮೊದಮೊದಲು ಕ್ರಿಯಾತ್ಮಕವಾಗಿದ್ದು ಕಾಲಾನಂತರ ನಶಿಸಿ, ಇನ್ನೂ ಉಳಿದಿರುವ ಕರುಳುಬಾಲ (ಅಪೆಂಡಿಕ್ಸ್) ನಾಲ್ಕು ಮೂಳೆಗಳಿಂದ ಕೂಡಿದ ಬೆನ್ನು ಹುರಿಯ ಮೊಟಕು ತುದಿಗಳು ಬಾಲವಿದ್ದ ಸಸ್ಯಾಹಾರಿ ಪೂರ್ವಜರಿಂದ ಮಾನವ ಉದಯಿಸಿದನೆಂದು ಸಾರುತ್ತವೆ. ಅಂತೆಯೇ ಈಗಿರುವ ಯಾವುದೇ ಜೀವಿ ಪ್ರಸ್ತುತ ಘಟ್ಟವನ್ನು ಮುಟ್ಟುವ ಮೊದಲು, ಯಾವಯಾವ ಅಂತಸ್ತುಗಳನ್ನು ದಾಟಬೇಕಾಯಿತೋ ಆ ಮಜಲುಗಳೆಲ್ಲವೂ ಹಂತಹಂತವಾಗಿ ಅದೇ ಕ್ರಮದಲ್ಲಿ ಅದರ ಭ್ರೂಣದ ಬೆಳೆವಣಿಗೆಯಾಗುವಾಗ ಪ್ರತಿಬಿಂಬತವಾಗುತ್ತವೆ. ಅಂದರೆ ಜೀವಿಯ ಬೆಳೆವಣಿಗೆ ತನ್ನ ಪೂರ್ವಜರ ಸಂಪೂರ್ಣ ಇತಿಹಾಸವನ್ನು ನಿರೂಪಿಸಿವುದು. ಇದನ್ನೇ ಫಾನ್ ಬೇಯರ್ ಪುನರಾವರ್ತನೆ (ರೀಕಪಿಚಲೇಷನ್) ಎಂದು ಕರೆದ. ಭೂಮಿಯ ವಿವಿಧ ಪದರುಗಳಲ್ಲಿ ಸುರಕ್ಷಿತವಾಗಿರುವ ಜೀವಿಗಳ ಕಳೆದುಳಿದ ಕಳೇಬರಗಳು, ಪರಂಪರಾನುಗತವಾಗಿ ಕಾಣಿಸಿಕೊಂಡ ಜೀವಿಗಳ ಚರಿತ್ರೆಯನ್ನು ಚಿತ್ರಿಸುವುವು. ಪಂಚಾಂಗುಲಿಯ ಚಲನಾಂಗಗಳಿದ್ದ ಪ್ರಾಚೀನ ಕುದುರೆಯಿಂದ, ಈಗಿನ ಏಕಾಂಗುಲಿ ಕುದುರೆಗಳ ರೂಪಾಂತರ ಪಳೆಯುಳಿಕೆಗಳ ಅಭ್ಯಾಸದಿಂದ ತಿಳಿಯುತ್ತದೆ. ಅಂತೆಯೇ ಮೀಸೋeóÉೂೀಯಿಕ್ ಯುಗದ ಅಂತ್ಯದಲ್ಲಿ ಜೀವಿಸಿದ್ದ ಆರ್ಕಿಯಾರ್ನಿಸ್ ಮತ್ತು ಆರ್ಕಿಯಾಪ್ಟರಿಕ್ಸ್ ಎಂಬ ಪ್ರಾಗ್ ಪಕ್ಷಿಗಳ ಫಾಸಿಲುಗಳ ಈಗಿನ ಉರಗಗಳಿಗೂ ಪಕ್ಷಿಗಳಿಗೂ ಇರುವ ಸಂಬಂಧವನ್ನು ಸಾರುತ್ತವೆ. ವಿವಿಧ ಜೀವಿಗಳ ರಸವಿಶೇಷದ ರಾಸಾಯನಿಕ ಪರೀಕ್ಷೆಯಿಂದಾಗಿ, ದೇಹಕ್ರಿಯೆಯ ಸಾಮ್ಯದ ಜೊತೆಗೆ ಜೀವಿಗಳಿಗಿರುವ ಬಾಂಧವ್ಯವು ವ್ಯಕ್ತವಾಗುತ್ತದೆ. ವಿಶ್ವದಾದ್ಯಂತ ಹೇರಳವಾಗಿರುವ ಶ್ರೇಷ್ಠ ಜಾನುವಾರು ತಳಿಗಳು, ಮರಗಿಡಗಳು, ಸಾಕುಪ್ರಾಣಿಗಳು, ಜೀವಿಗಳಲ್ಲಾಗುವ ಅವಿರತ ವಿಕಾಸದಲ್ಲಿ ಮಾನವನ ಕೈವಾಡಕ್ಕೆ ಸಜೀವ ಸಾಕ್ಷಿಗಳು. ಇದರಿಂದ ಜೀವಿಗಳಲ್ಲಿ ವಿಕಾಸವಾಗಿದ್ದರು ವಿಕಾಸದ ವಿಧಾನದ ವಿಷಯದಲ್ಲಿ ಹಲವಾರು ಸಿದ್ದಾಂತಗಳಿವೆ.		(ಎಸ್.ಎಚ್.ಒ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ